ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ
(ಪಿಟಿಐ ಚಿತ್ರ)
ನವದೆಹಲಿ: ಇರಾನ್ ಪರಮಾಣು ಘಟಕಗಳ ಮೇಲೆ ಅಮೆರಿಕದ ದಾಳಿ ಮತ್ತು ಇಸ್ರೇಲ್ ಆಕ್ರಮಣವನ್ನು ಖಂಡಿಸದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದ್ದು, ಮತ್ತಷ್ಟು ನೈತಿಕ ಸ್ಥೈರ್ಯ ತೋರಬೇಕು ಎಂದು ಒತ್ತಾಯಿಸಿದೆ.
ಇರಾನ್ ಹಾಗೂ ಇಸ್ರೇಲ್‌ನಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣಿಸಿರುವಂತೆಯೇ ರಾಜತಾಂತ್ರಿಕತೆ ಮೂಲಕ ಬಿಕ್ಕಟ್ಟು ಶಮನಗೊಳಿಸುವ ಅಗತ್ಯತೆ ಕುರಿತಾಗಿಯೂ ಕಾಂಗ್ರೆಸ್ ಪ್ರತಿಪಾದಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, 'ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ಮಾತುಕತೆ ನಡೆಸಬೇಕೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯು ಹಾಸ್ಯಾಸ್ಪದವಾಗಿದೆ' ಎಂದು ಹೇಳಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಈವರೆಗೆ ಇರಾನ್ ಮೇಲೆ ಅಮೆರಿಕದ ದಾಳಿ ಹಾಗೂ ಇಸ್ರೇಲ್‌ನ ಆಕ್ರಮಣವನ್ನು ಖಂಡಿಸಿಲ್ಲ. ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ಮೇಲೆ ನಡೆಯುತ್ತಿರುವ ನರಮೇಧದ ಕುರಿತು ಗಾಢ ಮೌನ ಕಾಯ್ದುಕೊಂಡಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್‌ಕಿಯಾನ್ ಅವರ ಜೊತೆ ಭಾನುವಾರ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಇರಾನ್–ಇಸ್ರೇಲ್ ಬಿಕ್ಕಟ್ಟು ಕುರಿತು ಕಳವಳ ವ್ಯಕ್ತಪಡಿಸಿದ್ದರು. ಮಾತುಕತೆ ಮತ್ತು ರಾಜತಾಂತ್ರಿಕ ಕ್ರಮಗಳ ಮೂಲಕ ಪ್ರಸ್ತುತ ಮೂಡಿರುವ ಬಿಕ್ಕಟ್ಟು ಶಮನಗೊಳಿಸಬೇಕು ಎಂದು ಸಲಹೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.