GSLV-F16 rocket carrying NISAR satellite lifts off
ಶ್ರೀಹರಿಕೋಟ: ಭೂ ವೀಕ್ಷಣೆ ಉದ್ದೇಶದಿಂದ ಇಸ್ರೊ ಹಾಗೂ ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ನಿಸಾರ್’ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ–ಎಫ್16 ರಾಕೆಟ್ ಬುಧವಾರ ನಭಕ್ಕೆ ಚಿಮ್ಮಿತು.
ಈ ಉಡ್ಡಯನಕ್ಕಾಗಿ ಮಂಗಳವಾರದಿಂದ 27.30 ಗಂಟೆಗಳ ಕ್ಷಣಗಣನೆ ಆರಂಭವಾಗಿತ್ತು. ಬುಧವಾರ ಸಂಜೆ 5.40ಕ್ಕೆ ಉಪಗ್ರಹ ಹೊತ್ತ ರಾಕೆಟ್, ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿನ ಉಡ್ಡಯನ ನೆಲೆಯಿಂದ ಬುಧವಾರ ಆಗಸಕ್ಕೆ ಚಿಮ್ಮಿತು. ಮೂರು ಹಂತಗಳ ಕಾರ್ಯಾಚರಣೆ ಬಳಿಕ, ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಸೇರಿಸಿತು.
ಭೂ ವೀಕ್ಷಣೆ ಉದ್ದೇಶದಿಂದ ಉಪಗ್ರಹ ನಿರ್ಮಾಣ ಹಾಗೂ ಉಡ್ಡಯನಕ್ಕಾಗಿ ರೂಪಿಸಲಾಗಿರುವ ಬಾಹ್ಯಾಕಾಶ ಕಾರ್ಯಕ್ರಮವೇ ‘ನಾಸಾ–ಇಸ್ರೊ ಸಿಂಥೆಟಿಕ್ ಅಪಾರ್ಚರ್ ರೇಡಾರ್’. ಇದರ ಸಂಕ್ಷಿಪ್ತರೂಪವೇ ‘ನಿಸಾರ್’.
ಈ ಉಪಗ್ರಹದಲ್ಲಿ ಶಕ್ತಿಶಾಲಿ ಎಲ್–ಬ್ಯಾಂಡ್ ಹಾಗೂ ಎಸ್–ಬ್ಯಾಂಡ್ ರೇಡಾರ್‌ಗಳನ್ನು ಅಳವಡಿಸಲಾಗಿದೆ. ಈ ಬ್ಯಾಂಡ್‌ಗಳನ್ನು ಕ್ರಮವಾಗಿ ನಾಸಾ ಮತ್ತು ಇಸ್ರೊ ವಿನ್ಯಾಸಗೊಳಿಸಿವೆ.
ಈ ಉಪಗ್ರಹವು ಇಡೀ ಭೂಮಿಗೆ ಸಂಬಂಧಿಸಿದ ದತ್ತಾಂಶ ಹಾಗೂ ಚಿತ್ರಗಳನ್ನು ಕಳುಹಿಸುತ್ತದೆ. ಹೀಗಾಗಿ, ಭೂಮಂಡಲದ ವಿದ್ಯಮಾನಗಳ ವೀಕ್ಷಣೆಗಾಗಿ ಆಗಸದಲ್ಲಿ ಭಾರತ ಅಳವಡಿಸಿರುವ ‘ಕಣ್ಣು‘ ಇದು ಎನ್ನಬಹುದು.
‘ನಿಸಾರ್’ ಉಪಗ್ರಹದ ಪ್ರಯೋಜನ
ಅರಣ್ಯಗಳು ಹಾಗೂ ಅವುಗಳಲ್ಲಿ ಕಂಡುಬರುವ ಬದಲಾವಣೆ ಕುರಿತು ಅಧ್ಯಯನ
ಬೆಳೆಗಳಲ್ಲಿನ ಬದಲಾವಣೆಗಳ ಮೇಲೆ ನಿಗಾ
ಜೌಗುಪ್ರದೇಶಗಳಲ್ಲಿ ಆಗುವ ಪರಿವರ್ತನೆಗಳ ಅಧ್ಯಯನ
ಗ್ರೀನ್‌ಲ್ಯಾಂಡ್ ಅಂಟಾರ್ಕ್ಟಿಕಾದಲ್ಲಿನ ಹಿಮಪದರುಗಳು ಸಾಗರದಲ್ಲಿನ ಮಂಜುಗಡ್ಡೆಗಳು ಹಾಗೂ ಹಿಮನದಿಗಳ ಕುರಿತು ಅಧ್ಯಯನ
ಭೂಕಂಪನ ಜ್ವಾಲಾಮುಖಿ ಭೂಕುಸಿತ ಹಾಗೂ ಸವಕಳಿಯಿಂದಾಗಿ ಭೂಮಿ ಮೇಲ್ಪದರು ವಿರೂಪಗೊಳ್ಳುವ ಪ್ರಕ್ರಿಯೆಯ ಅಧ್ಯಯನ
ಭಾರತ ಮತ್ತು ಅಮೆರಿಕದ ವಿಜ್ಞಾನಿಗಳು/ಸಂಶೋಧಕರು ಆಸಕ್ತಿ ಹೊಂದಿರುವ ವಿಷಯಗಳ ಅಧ್ಯಯನಕ್ಕೆ ನೆರವು
ಜಿಎಸ್‌ಎಲ್‌ವಿ–ಎಫ್16 : ಉಡ್ಡಯನಕ್ಕೆ ಬಳಸಿದ ರಾಕೆಟ್
51.7 ಮೀ. : ರಾಕೆಟ್‌ನ ಎತ್ತರ
₹10 ಸಾವಿರ ಕೋಟಿ (1.2 ಶತಕೋಟಿ ಡಾಲರ್): ಯೋಜನೆಯ ವೆಚ್ಚ
2393 ಕೆ.ಜಿ : ‘ನಿಸಾರ್’ ಉಪಗ್ರಹದ ಒಟ್ಟು ತೂಕ
5 ವರ್ಷ: ಉಪಗ್ರಹ ಕಾರ್ಯಾಚರಣೆ ನಡೆಸುವ ಅವಧಿ
745 ಕಿ.ಮೀ. : ಉಪಗ್ರಹ ಸೇರಿಸಲಾದ ಕಕ್ಷೆ ಮತ್ತು ಭೂಮಿ ನಡುವಿನ ಅಂತರ
19 ನಿಮಿಷ: ಭೂಮಿಯ ಕೆಳಕಕ್ಷೆಗೆ ತಲುಪಲು ರಾಕೆಟ್ ತೆಗೆದುಕೊಂಡ ಸಮಯ
‘ನಿಸಾರ್’ ಉಪಗ್ರಹ ಹೊತ್ತ ಜಿಎಸ್‌ಎಲ್‌ವಿ–ಎಫ್16 ರಾಕೆಟ್ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿನ ಉಡ್ಡಯನನೆಲೆಯಿಂದ ಬುಧವಾರ ಆಗಸಕ್ಕೆ ಚಿಮ್ಮಿತು ಪಿಟಿಐ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.