ADVERTISEMENT

ಕಾರ್ಗಿಲ್‌ ವಿಜಯದ ಮೊದಲ ಹೆಜ್ಜೆಯಿಟ್ಟಿದ್ದು ಕನ್ನಡಿಗ ಕರ್ನಲ್‌ ರವೀಂದ್ರನಾಥ್‌

‘ಕಾರ್ಗಿಲ್‌ ವಿಜಯೋತ್ಸವ’ಕ್ಕೆ 21ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 3:28 IST
Last Updated 26 ಜುಲೈ 2020, 3:28 IST
ಕರ್ನಲ್‌ ಎಂ.ಬಿ. ರವೀಂದ್ರನಾಥ್‌
ಕರ್ನಲ್‌ ಎಂ.ಬಿ. ರವೀಂದ್ರನಾಥ್‌   

ಕಾರ್ಗಿಲ್‌ ಯುದ್ಧದಲ್ಲಿ ಭಾರತದ ಮೊದಲ ಜಯ ದಾಖಲಿಸಿದ್ದುದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಜನಿಸಿದ ಕರ್ನಲ್ ರವೀಂದ್ರನಾಥ್. ವಿನಯವಂತಿಕೆಗೆ ಇನ್ನೊಂದು ಹೆಸರಿನಂತೆ ಬದುಕು ಸಾಗಿಸಿದ ಈ ಧೀರಯೋಧ ತಮ್ಮ ಸಾಧನೆಯ ಬಗ್ಗೆ ಅಷ್ಟಾಗಿ ಹೇಳಿಕೊಳ್ಳುತ್ತಿರಲಿಲ್ಲ. ರವೀಂದ್ರನಾಥ್ ಅವರ ತಮ್ಮ ಎಂ.ಬಿ.ಹಾಲಸ್ವಾಮಿ ಈ ಲೇಖನದಲ್ಲಿ ಅಣ್ಣನ ಒಡನಾಟವನ್ನು ನೆನೆದಿದ್ದಾರೆ.

–––

‘ಯಶಸ್ಸು ತಂಡದ ಸದಸ್ಯರಿಂದ ಲಭಿಸುತ್ತದೆ; ವೈಫಲ್ಯ ನಾಯಕನಿಂದ ಬರುತ್ತದೆ’ ಎಂಬ ನಿಲುವು ನನ್ನ ದೊಡ್ಡಣ್ಣ ಕರ್ನಲ್‌ ಎಂ.ಬಿ. ರವೀಂದ್ರನಾಥ್‌ ಅವರದ್ದಾಗಿತ್ತು. ಪಾಕಿಸ್ತಾನದ ವಿರುದ್ಧದ ಕಾರ್ಗಿಲ್‌ ಯುದ್ಧದಲ್ಲಿ 1999 ಜುಲೈ 26ರಂದು ಭಾರತ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದವರಲ್ಲಿ ಒಬ್ಬರಾಗಿದ್ದ ಅಣ್ಣನಿಗೆ ಕೇಂದ್ರ ಸರ್ಕಾರ ವೀರಚಕ್ರವನ್ನು ನೀಡಿ ಗೌರವಿಸಿತ್ತು.

ADVERTISEMENT

ಆದರೆ, ಅವರೆಂದೂ ವೀರಚಕ್ರವನ್ನು ಸಾರ್ವಜನಿಕವಾಗಿ ಹಾಕಿಕೊಂಡು ಸಂಭ್ರಮಿಸಿದ್ದನ್ನು ನಾವು ನೋಡಿಲ್ಲ. ಯುದ್ಧದ ಸನ್ನಿವೇಶಗಳ ಬಗ್ಗೆಯೂ ಕುಟುಂಬದ ಸದಸ್ಯರೊಂದಿಗೆ ಹೆಚ್ಚೇನು ಹಂಚಿಕೊಂಡಿರಲಿಲ್ಲ. ಅವರ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಮಾತುಗಳು, ಪತ್ರಿಕೆಗಳಲ್ಲಿ ಬಂದ ವರದಿಯಿಂದಲೇ ನಾವು ಎಷ್ಟೋ ಸಂಗತಿಗಳನ್ನು ತಿಳಿದುಕೊಂಡಿದ್ದೆವು. ‘ಶತ್ರುಗಳೊಂದಿಗೆ ಯುದ್ಧ ಮಾಡುವುದು ನನ್ನ ಕರ್ತವ್ಯವಾಗಿತ್ತು; ಅದನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ’ ಎಂಬ ಭಾವವಷ್ಟೇ ಕೊನೆಯವರೆಗೂ ಅವರಲ್ಲಿತ್ತು.

ನಮ್ಮ ತಂದೆ ಮಾಗೋಡು ಬಸಪ್ಪ ಅವರ ಊರು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ. ಹೊನ್ನಾಳಿ ತಾಲ್ಲೂಕಿನ ಕುಂದೂರು ತಾಯಿ ಸರೋಜಮ್ಮ ಅವರ ತವರೂರು. 1959ರ ಮೇ 15ರಂದು ಅಣ್ಣ ಕುಂದೂರಿನಲ್ಲಿ ಜನಿಸಿದ್ದ. ನನಗಿಂತ ಒಂಬತ್ತು ವರ್ಷ ದೊಡ್ಡವನು. ತಂದೆ ಶಿಕ್ಷಕರಾಗಿದ್ದರು. ನಮ್ಮದು ನಾಲ್ವರು ಅಣ್ಣ–ತಮ್ಮಂದಿರು ಹಾಗೂ ಒಬ್ಬ ಸಹೋದರಿ ಇದ್ದ ತುಂಬು ಕುಟುಂಬ. ರವೀಂದ್ರನಾಥ್‌ ನಮ್ಮೆಲ್ಲರಿಗಿಂತ ದೊಡ್ಡವರಾಗಿದ್ದರು. ನಾನೇ ಕಿರಿಯವ.

ಸೇನೆಗೆ ಸೇರಬೇಕು ಎಂಬ ಕನಸನ್ನುಬಾಲ್ಯದಿಂದಲೇ ಅಣ್ಣ ಕಾಣುತ್ತಿದ್ದ. ಐದನೇ ತರಗತಿಯಲ್ಲಿದ್ದಾಗ ಪತ್ರಿಕೆಯಲ್ಲಿ ಬಂದ ಪ್ರಕಟಣೆಯನ್ನು ನೋಡಿ, ವಿಜಯಪುರದ ಸೈನಿಕ ಶಾಲೆಗೆ ಅವನೇ ಅರ್ಜಿ ಸಲ್ಲಿಸಿದ್ದ. 1976ರಲ್ಲಿ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಗೆ ಆಯ್ಕೆಯಾದ. ಡೆಹ್ರಾಡುನ್‌ನ ಇಂಡಿಯನ್‌ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡ. 1980ರಲ್ಲಿ ಭಾರತೀಯ ಸೇನೆಯ ಪದಾತಿದಳಕ್ಕೆ ಆಯ್ಕೆಯಾಗಿ ಭಾರತ ಮಾತೆಯ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡ. ಅಲ್ಪಾವಧಿಯಲ್ಲೇ ಉತ್ತಮ ಸೇವೆಯಿಂದಾಗಿ ಹಿರಿಯ ಅಧಿಕಾರಿಗಳ ವಿಶ್ವಾಸ ಗಳಿಸಿದ್ದ. ಕಮಾಂಡೋ ತರಬೇತಿಯನ್ನೂ ಪೂರೈಸಿದ. ಸೇನೆಗೆ ತರಬೇತುದಾರರನ್ನು ಸಜ್ಜುಗೊಳಿಸುವ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್‌ ಸರ್ವಿಸ್‌ ಸ್ಟಾಫ್‌ ಕಾಲೇಜಿಗೆ ಆಯ್ಕೆಯಾಗಿ ಶಿಕ್ಷಣವನ್ನೂ ಪಡೆದುಕೊಂಡ.

ಅಣ್ಣನ ನೆರಳಿನಲ್ಲಿ ಬೆಳೆಯುತ್ತಿದ್ದ ನಾನೂ ವಿಜಯಪುರದ ಸೈನಿಕ ಶಾಲೆಯನ್ನು ಸೇರಿಕೊಂಡಿದ್ದೆ. ಅಣ್ಣನಂತೆ ನಾನೂ ಸೇನೆಗೆ ಸೇರಬೇಕು ಎಂಬ ಆಸೆ ಹೊಂದಿದ್ದೆ. ಆದರೆ, ನನಗೆ ಆಯ್ಕೆಯಾಗುವ ಭಾಗ್ಯ ಸಿಗಲಿಲ್ಲ. ಹೀಗಾಗಿ ಎಂಜಿನಿಯರಿಂಗ್‌ ಮಾಡಿ, ನಮ್ಮ ಕುಟುಂಬದ ಉದ್ಯಮದಲ್ಲಿ ತೊಡಗಿಕೊಂಡೆ.

ಅಣ್ಣ ಆರ್ಮಿ ಟ್ರೇನಿಂಗ್‌ ಕಮಾಂಡ್‌ನಿಂದ ಕಂಪ್ಯೂಟರ್‌ ಆಧಾರಿತ ಯುದ್ಧ ಗೇಮಿಂಗ್‌ ಅಭಿವೃದ್ಧಿ ಪಡಿಸುವ ಕೇಂದ್ರ ತಂಡಕ್ಕೆ ಆಯ್ಕೆಯಾದ. ಕಂಪ್ಯೂಟರ್‌ ಆಧಾರಿತ ಯುದ್ಧಗಳಿಗೆ ಸಂಬಂಧಿಸಿದಂತೆ ವಿಡಿಯೊ ಗೇಮ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಜರ್ನಲ್‌ಗಳಲ್ಲಿ ಲೇಖನಗಳನ್ನೂ ಆಗಾಗ ಬರೆಯುತ್ತಿದ್ದ.

ಕರ್ನಲ್‌ ಎಂ.ಬಿ. ರವೀಂದ್ರನಾಥ್‌ ಅವರಿಗೆ ಅಂದಿನ ರಾಷ್ಟ್ರಪತಿ ಕೆ.ಆರ್‌. ನಾರಾಯಣ್‌ ಅವರು ‘ವೀರಚಕ್ರ’ ಪ್ರದಾನ ಮಾಡಿದ ಸಂದರ್ಭ.

ಅತ್ಯಂತ ಕಿರಿಯ ವಯಸ್ಸಿನಲ್ಲೇ ಅರುಣಾಚಲ ಪ್ರದೇಶದಲ್ಲಿ ಲೆಫ್ಟಿನೆಂಟ್‌ ಆಗಿ ಕಾರ್ಯನಿರ್ವಹಿಸಿದ. ಜಮ್ಮು–ಕಾಶ್ಮೀರದಲ್ಲಿ 1986–87ರಲ್ಲಿ ದಂಗೆಗಳು ನಡೆದಾಗ ಅದನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ. ಕಾರ್ಗಿಲ್‌ ಯುದ್ಧ ಆರಂಭಗೊಳ್ಳುವ ಮೊದಲು ಜಮ್ಮು–ಕಾಶ್ಮೀರದಲ್ಲಿ ವಿವಿಧ ಹುದ್ದೆಗಳನ್ನೂ ಆತ ನಿಭಾಯಿಸಿದ್ದ.

ವಿಜಯದ ಮೊದಲ ಹೆಜ್ಜೆ: 1999ರಲ್ಲಿ ‘ಆಪರೇಷನ್‌ ವಿಜಯ್‌’ ಆರಂಭಗೊಂಡಾಗ ಕಾರ್ಗಿಲ್‌ ವಲಯದಲ್ಲಿ 2ನೇ ರಜಪುತಾನಾ ರೈಫಲ್ಸ್‌ನ ಮುಂದಾಳತ್ವವನ್ನು ಅಣ್ಣ ವಹಿಸಿದ್ದ. ಶತ್ರು ರಾಷ್ಟ್ರದ ವಿರುದ್ಧ ವ್ಯೂಹ ರಚಿಸುವಲ್ಲಿ ಭಾರತಕ್ಕೆ ಅತ್ಯಂತ ಪ್ರಮುಖ ತಾಣವಾಗಿದ್ದ ಟೋಲೋಲಿಂಗ್‌ ಬೆಟ್ಟ ಹಾಗೂ ಶ್ರೀನಗರದ ಲೇಹ್‌ ಹೆದ್ದಾರಿಯ ದ್ರಾಸ್‌ ವಲಯ (ಸೆಕ್ಟರ್‌) ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ಅಣ್ಣನಿಗೆ ವಹಿಸಲಾಗಿತ್ತು.

ಬೆಟ್ಟದ ಮೇಲಿನಿಂದ ಗುಂಡಿನ ಮಳೆಗರೆಯುತ್ತಿದ್ದರೂ ತಮ್ಮ ಬೆಟಾಲಿಯನ್‌ ಅನ್ನು ಮುನ್ನಡೆಸಿ, ಶತ್ರುಗಳನ್ನು ಹಿಮ್ಮೆಟ್ಟಿಸಿದ್ದ. ‘ಟೋಲೋಲಿಂಗ್‌ ಬೆಟ್ಟದ ತುತ್ತತುದಿಯಲ್ಲಿದ್ದೇವೆ’ ಎಂಬ ಸಂದೇಶವನ್ನು ಜೂನ್‌ 13ರಂದು ಮುಂಜಾನೆ ಅಣ್ಣ ತಮ್ಮ ಕಮಾಂಡರ್‌ಗೆ ರವಾನಿಸಿದ್ದರಂತೆ. ಟೋಲೋಲಿಂಗ್‌ ಬೆಟ್ಟವನ್ನು ವಶಪಡಿಸಿಕೊಂಡಿದ್ದು ಕಾರ್ಗಿಲ್‌ ಯುದ್ಧದ ಮೊದಲ ವಿಜಯವಾಗಿತ್ತು. ಇದು ಯುದ್ಧದ ದಿಕ್ಕನ್ನೇ ಬದಲಿಸಿತ್ತು. ಈ ಬೆಟ್ಟ ವಶಪಡಿಸಿಕೊಂಡಿದ್ದರಿಂದಲೇ ಶತ್ರುಗಳನ್ನು ಹಿಮ್ಮೆಟ್ಟಿಸಿ, ಅಕ್ಕ–ಪಕ್ಕದ ಬೆಟ್ಟಗಳನ್ನೂ ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಕಾರ್ಗಿಲ್‌ ಯುದ್ಧವನ್ನು ಭಾರತ ಗೆಲ್ಲಲು ಇದು ಮುನ್ನುಡಿ ಬರೆಯಿತು. (ಈ ವಿಷಯ ’ಎಲ್‌ಒಸಿ ಕಾರ್ಗಿಲ್’ ಚಲನಚಿತ್ರದಲ್ಲಿಯೂ ದಾಖಲಾಗಿದೆ. ಜನಪ್ರಿಯ ನಟ ಆಶೀಷ್ ವಿದ್ಯಾರ್ಥಿ ಅವರು ಕರ್ನಲ್ ರವೀಂದ್ರನಾಥ್ ಅವರ ಪಾತ್ರ ನಿರ್ವಹಿಸಿದ್ದಾರೆ).

ಅಂದು ಭೂಸೇನೆಯ ಮುಖ್ಯಸ್ಥ ಜನರಲ್‌ ವಿ.ಪಿ. ಮಲ್ಲಿಕ್‌ ಅವರು ಎಲ್ಲ ಶಿಷ್ಟಾಚಾರಗಳನ್ನು ಬಿಟ್ಟು, ಸ್ಥಳದಲ್ಲಿಯೇ ರವೀಂದ್ರನಾಥ್‌ಗೆ ‘ಕರ್ನಲ್‌’ ಹುದ್ದೆಗೆ ಪದೋನ್ನತಿ ನೀಡಿದ್ದರು. ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದ ಆತನ ಬೆಟಾಲಿಯನ್‌ಗೆ ನಾಲ್ಕು ಮಹಾವೀರ ಚಕ್ರ, ಏಳು ವೀರಚಕ್ರ, ಒಂಬತ್ತು ಸೇನಾ ಪದಕ, ಎರಡು ಪಶಂಸಾ ಪದಕಗಳು ಲಭಿಸಿದ್ದವು. ಅಣ್ಣನಿಗೂ ‘ವೀರಚಕ್ರ’ವನ್ನು ನೀಡಿ ಗೌರವಿಸಲಾಗಿತ್ತು.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆಯಲ್ಲಿರುವ ರವೀಂದ್ರನಾಥ್ ಅವರ ಮೂಲ ಮನೆ

ಯುದ್ಧದ ಬಳಿಕ 2000ರಲ್ಲಿ ಸೇವೆಯಿಂದ ನಿವೃತ್ತಿ ಪಡೆದು, ಬೆಂಗಳೂರಿನಲ್ಲಿರುವ ನಮ್ಮ ಕುಟುಂಬ ನಡೆಸುತ್ತಿದ್ದ ಮಾಗೋಡ್‌ ಲೇಸರ್‌ ಉದ್ಯಮದಲ್ಲಿ ತೊಡಗಿಸಿಕೊಂಡ. ಹಲವು ಸಾಫ್ಟ್‌ವೇರ್‌ಗಳನ್ನು ಅವನೇ ಸಿದ್ಧಪಡಿಸಿಕೊಡುವ ಮೂಲಕ ಉದ್ಯಮವನ್ನು ಮುನ್ನಡೆಸಿದ್ದ. 2018ರ ಏಪ್ರಿಲ್ 8ರಂದು ಬೆಂಗಳೂರಿನಲ್ಲಿ ಮುಂಜಾನೆ ಜಾಗಿಂಗ್‌ ಮಾಡುತ್ತಿದ್ದಾಗ ಹೃದಯಾಘಾತ ಉಂಟಾಗಿ ನಮ್ಮನ್ನೆಲ್ಲ ಬಿಟ್ಟು ಹೋದ. ಅಣ್ಣನಿಗೆ ಪತ್ನಿ ಅನಿತಾ ಹಾಗೂ ಪುತ್ರಿಯರಾದ ಪ್ರಾರ್ಥನಾ ಮತ್ತು ಪ್ರೇರಣಾ ಇದ್ದಾರೆ.

ಅಣ್ಣ ನೇರ–ನಿಷ್ಠುರವಾದಿಯಾಗಿದ್ದ. ಅವನ ಬದುಕು ಪಾರದರ್ಶಕವಾಗಿತ್ತು. ಅವನ ಬದುಕಿನಲ್ಲಿದ್ದ ಶಿಸ್ತೇ ಈ ಎತ್ತರಕ್ಕೆ ಅವನನ್ನು ಬೆಳೆಸಿತ್ತು. ನಿವೃತ್ತಿಯಾದ ಬಳಿಕ ತವರೂರಾದ ದಾವಣಗೆರೆಗೆ ಆಗಾಗ ಹೋಗುತ್ತಿದ್ದ. ಅವನ ಸ್ನೇಹಿತರನ್ನು ಭೇಟಿ ಮಾಡುತ್ತಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಹಾಗೂ ಗಾಯಗೊಂಡಿದ್ದ ಸೈನಿಕರ ಮನೆಗಳಿಗೆ ಆತ ಆಗಾಗ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿಕೊಂಡು ಬರುತ್ತಿದ್ದ. ಆದರೆ, ಕಾರ್ಗಿಲ್‌ ವಿಜಯೋತ್ಸವದ 20ನೇ ವರ್ಷಾಚರಣೆ ಸಂದರ್ಭದಲ್ಲಿ ಸಂಭ್ರಮ ಪಡಲು ನಮ್ಮೊಂದಿಗೆ ಅಣ್ಣ ಇಲ್ಲ ಎಂಬುದೇ ನೋವಿನ ಸಂಗತಿ.

‘ಪ್ರಜಾವಾಣಿ’ ವರದಿಯಲ್ಲಿ ಟೊಲೊಲಿಂಗ್ ವಶಕ್ಕೆ ಪಡೆದ ಸುದ್ದಿ. ಜೂನ್ 15, 1999

ರವೀಂದ್ರನಾಥ್ ಹೇಳಿದ್ದ ಅಪರೂಪದ ಕಥೆಗಳು

‘ಕಾರ್ಗಿಲ್ ಯುದ್ಧದ ಮೊದಲ ಜಯ ದಾಖಲಿಸಿದವರು ರವೀಂದ್ರನಾಥ್’ ಅಂತ ಎಲ್ಲರೂ ಹೇಳುತ್ತಾರೆ. ಆದರೆ ಈ ರವೀಂದ್ರನಾಥ್‌ ಜೊತೆಗೆ ಅಂದು ಇದ್ದವರು ಗಂಡುಗಲಿಗಳು. ಅವರು ಶತ್ರುಗಳ ಗುಂಡಿಗೆ ಎದೆಯೊಡ್ಡಿದರು, ಬೆನ್ನು ತೋರದೆ ಮುಂದೆ ಹೋದರು. ನಾನೂ ಅವರ ಜೊತೆಗೆ ಹೋಗಬೇಕಿತ್ತು. ಯಾಕೆ ಉಳಿದೆನೋ ಗೊತ್ತಿಲ್ಲ. ಅಂಥ ಧೈರ್ಯಶಾಲಿ ಸೈನಿಕರು ಇರುವಾಗ ಜಯ ನಮಗೆ ಬಾರದಿರಲು ಸಾಧ್ಯವೇ? ಇಂದು ಈ ರವೀಂದ್ರನಾಥ್‌ಗೆ ಇಷ್ಟೆಲ್ಲಾ ಗೌರವ, ಮನ್ನಣೆ ಸಿಗುತ್ತಿದೆ ಎಂದರೆ ಅಂದು ನನ್ನೊಡನೆ ಹೋರಾಡಿದ ಸೈನಿಕರೇ ಕಾರಣ.

ಕಾರ್ಗಿಲ್‌ನಲ್ಲಿ ನಮ್ಮ ಸೇನೆ ಕಾರ್ಯಾಚರಣೆ ಆರಂಭಿಸಿದ ಮೊದಲ ದಿನಗಳಲ್ಲಿ ಅಲ್ಲಿ ಅಡಗಿರುವ ಶತ್ರುಗಳ ಬಲದ ಸರಿಯಾದ ಅಂದಾಜು ಇರಲಿಲ್ಲ. ಸ್ವಲ್ಪಮಟ್ಟಿಗೆ ಹಿನ್ನಡೆಯಾಯಿತು. ಫಿರಂಗಿ ದಾಳಿ (ಆರ್ಟಿಲರಿ) ಅನಿವಾರ್ಯ ಎಂದು ಹಿರಿಯ ಅಧಿಕಾರಿಗಳಿಗೆ ಮನದಟ್ಟಾದ ನಂತರ ಯುದ್ಧತಂತ್ರವನ್ನು ಸೂಕ್ತರೀತಿಯಲ್ಲಿ ಬದಲಿಸಲಾಯಿತು.

ಬೋಫೋರ್ಸ್‌ ಫಿರಂಗಿಗಳಿಗೆ ಶೆಲ್‌ಗಳನ್ನು ಹೊತ್ತು ಸಾಗಿಸುವ ಕೆಲಸವನ್ನು ನಮ್ಮ ತುಕಡಿಗೆ ವಹಿಸಿದ್ದರು. ಪಾಕ್ ಸೇನೆಯ ಕಣ್ಣಿಗೆ ಬೀಳುವಂತಿದ್ದ ಅಪಾಯಕಾರಿ ಮಾರ್ಗ ಅದಾದ ಕಾರಣ ವಾಹನಗಳನ್ನು ಬಳಸದೆ, ಹೆಗಲ ಮೇಲೆ ಆರ್ಟಿಲರಿ ಶೆಲ್‌ಗಳನ್ನು ಹೊತ್ತು ಸಾಗಿಸುತ್ತಿದ್ದೆವು. ಈ ಕಾರ್ಯಾಚರಣೆ ರಾತ್ರಿಯಿಡೀ ನಡೆಯುತ್ತಿತ್ತು. ಸೂರ್ಯನ ಬೆಳಕು ಭೂಮಿಗೆ ಬಿದ್ದ ಮೇಲೆ ಕೊಂಚ ಬಿಡುವು. ಆ ಹೊತ್ತಿಗೆ ಬಾಣಸಿಗರು ನಮಗಾಗಿ ಉಪಾಹಾರ ತಯಾರಿಸಿ, ಕಳುಹಿಸಿಕೊಡುತ್ತಿದ್ದರು. ಬಹುತೇಕ ದಿನಗಳಲ್ಲಿ ಅದು ಪೂರಿ–ಸಬ್ಜಿ. ಅವತ್ತೊಂದು ದಿನ ಉಪಹಾರದ ಅವಧಿ ಮುಗಿದ ಮೇಲೆಯೂ ಓರ್ವ ಸೈನಿಕ ಪೂರಿಯನ್ನು ಸಬ್ಜಿಯಲ್ಲಿ ಹೊರಳಿಸುತ್ತಲೇ ಇದ್ದ. ನಾನು ರೇಗಿಸಿದ್ದೆ.

ಅಂದು ಸಂಜೆಯೂ ಅವರು ಚಪಾತಿಯನ್ನು ಹಾಗೆಯೇ ಸಬ್ಜಿಯಲ್ಲಿ ಹೊರಳಿಸುತ್ತಿದ್ದರು. ನಾನು ಮತ್ತೆ ಅವರನ್ನು ತಮಾಷೆ ಮಾಡಿದೆ. ‘ನೀವು ಹುಡುಗರು ಸಾಬ್, ತಮಾಷೆ ಮಾಡಿ. ಮುದೊಂದು ದಿನ ನಿಮಗೆ ಗೊತ್ತಾಗುತ್ತೆ’ ಎಂದು ಅವರು ಮುಗುಳ್ನಕ್ಕರು. ‘ಏನಾಯ್ತು ಫ್ರೆಂಡ್’ ಎಂದೆ. ‘ಹಲ್ಲು ಅಲುಗಾಡುತ್ತಿದೆ. ಗಟ್ಟಿ ಪೂರಿ–ಚಪಾತಿ ಅಗಿಯಲು ಅಗಲ್ಲ. ಅದಕ್ಕೇ ಸಬ್ಜಿಯಲ್ಲಿ ತುಸು ಹೊರಳಿಸಿ, ಬಾಯಲ್ಲಿ ನೆಲುಮಿ ತಿನ್ನುತ್ತಿದ್ದೇನೆ’ ಎಂದರು. ‘ನಿನ್ನ ಸಮಸ್ಯೆ ಹೀಗಿದೆ ಆಂತ ಹೇಳೋದಲ್ವಾ? ಬೇರೆ ಏನಾದರೂ ತಿಂಡಿ ಕೊಡಲು ಹೇಳ್ತಿದ್ದೆ’ ಅಂದೆ. ಅದಕ್ಕೆ ಆ ವ್ಯಕ್ತಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?

‘ಬೇಡ ಸಾಹೇಬ್. ನೀವೀಗ ನನ್ನ ಹಲ್ಲಿನ ಬಗ್ಗೆ, ನನಗೆ ಸರಿಹೊಂದುವ ತಿಂಡಿಕೊಡಿಸುವ ಬಗ್ಗೆ ಒಂದು ನಿಮಿಷವೂ ಯೋಚಿಸಬಾರದು. ದೇಶ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ನಾವು ಇಂಥ ಚಿಲ್ಲರೆ ವಿಷಯಗಳಿಗೆ ನಿಮ್ಮ ಗಮನಸೆಳೆದು, ನಾವು ನಿಮ್ಮ ಟೈಂ ಹಾಳು ಮಾಡಬಾರದು’ ಎಂದುಬಿಟ್ಟರು. ‘ಗೆಲ್ತೀವಿ ಬಿಡು’ ಎಂದು ಅದೇ ಕ್ಷಣ ಆತ್ಮವಿಶ್ವಾಸದಿಂದ ಹೇಳಿದ್ದೆ. ನನ್ನ ಆತ್ಮವಿಶ್ವಾಸದ ಹಿಂದೆ ಹಲ್ಲುನೋವು ನುಂಗಿಕೊಂಡ ಆ ಯೋಧನ ತ್ಯಾಗ ನಗುತ್ತಿತ್ತು.

ನಮ್ಮ ಜೊತೆಗೆ ಶೆಲ್‌ಗಳನ್ನು ಸಾಗಿಸುತ್ತಿದ್ದ ಇನ್ನೊಬ್ಬ ವ್ಯಕ್ತಿ ಕುಂಟುತ್ತಿದ್ದ. ಅವನ ಕಾಲಿಗೆ ಏಟಾಗಿತ್ತು. ನಾನು ಗಮನಿಸಿ ಹತ್ತಿರ ಕರೆದೆ. ‘ಸುಸ್ತಾದ್ರೆ ಕೂತ್ಕೊ. ಏನಾಗಿದೆ? ಡಾಕ್ಟರ್ ಹತ್ರ ಹೋಗು’ ಅಂದೆ. ಆತ ‘ನನ್ನಿಂದ ನಿಮಗೆ ತೊಂದ್ರೆ ಆಗ್ತಿದ್ಯಾ’ ಅಂದ. ‘ಇಲ್ಲ ಕಣಪ್ಪ, ಯಾಕೋ ಕುಂಟ್ತಾ ಇದ್ದೀಯಲ್ಲ, ಅದಕ್ಕೆ ಹೇಳಿದೆ’ ಅಂದೆ. ಅವನ ಅಂಗಾಲಿಗೆ ಗಾಯವಾಗಿತ್ತು. ಚಳಿಗೆ ಬಾತುಕೊಂಡಂತೆ ಆಗಿ ಶೂ ಸರಿಯಾಗಿ ಹಾಕಿಕೊಳ್ಳಲು ಆಗುತ್ತಿರಲಿಲ್ಲ. ಆದರೂ ಅವನು ವಿಶ್ರಾಂತಿ ಪಡೆಯಲು ನಿರಾಕರಿಸುತ್ತಿದ್ದ. ‘ಜೊತೆಯವರಷ್ಟು ವೇಗವಾಗಿ ನಡೆಯಲು ನನ್ನಿಂದ ಸಾಧ್ಯವಾಗಲಾರದು. ಆದರೆ ನಾನು ಸಾಧ್ಯವಾದಷ್ಟೂ ತುದಿಯಲ್ಲಿ, ವೇಗವಾಗಿ ನಡೆಯುವವರಿಗೆ ಜಾಗ ಬಿಟ್ಟು ನಡೆಯುತ್ತಿದ್ದೇನೆ. ದಯವಿಟ್ಟು ನನಗೆ ಈ ಕೆಲಸಮಾಡಬೇಡ ಎನ್ನದಿರಿ. ನಾನು ಮಾಡುತ್ತಿರುವ ಕೆಲಸದ ಮಹತ್ವ ನನಗೆ ಗೊತ್ತು. ಗಾಯವಾಗಿದೆ ಅಂತ ಸುಮ್ಮನೆ ಕುಳಿತರೆ ಅದು ಅಪರಾಧ’ ಎಂದು ಅವನು ಮುಖ ಸಪ್ಪಗೆ ಮಾಡಿಕೊಂಡ. ‘ಹೋಗಪ್ಪಾ ಹೋಗು, ನೀನು ಹೊತ್ತು ಹಾಕಿದ ಶೆಲ್‌ನಿಂದಲೇ ಅವರ ಬಂಕರ್ ಪುಡಿ ಮಾಡುವ ಹೋಗು’ ಅಂತ ಬೆನ್ನುತಟ್ಟಿ ಕಳಿಸಿಕೊಟ್ಟಿದ್ದೆ.

(ಬೆಂಗಳೂರು ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ 2013ರ ಅಕ್ಟೋಬರ್ 29ರಂದು ಪ್ರಸ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆಯೋಜಿಸಿದ್ದ ‘ನ್ಯಾಷನಲ್ ಡಿಫೆನ್ಸ್’ ಕಾರ್ಯಾಗಾರದಲ್ಲಿ ಕರ್ನಲ್ ರವೀಂದ್ರನಾಥ್ ಹಂಚಿಕೊಂಡಿದ್ದ ನೆನಪುಗಳಿವು).

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.