ADVERTISEMENT

ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: BJP ಜತೆ ಮೈತ್ರಿ ಇಲ್ಲ; ಒಮರ್ ಅಬ್ದುಲ್ಲಾ

ಪಿಟಿಐ
Published 18 ಅಕ್ಟೋಬರ್ 2025, 12:49 IST
Last Updated 18 ಅಕ್ಟೋಬರ್ 2025, 12:49 IST
<div class="paragraphs"><p>ಒಮರ್ ಅಬ್ದುಲ್ಲಾ</p></div>

ಒಮರ್ ಅಬ್ದುಲ್ಲಾ

   

ಪಿಟಿಐ ಚಿತ್ರ

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಪಡೆಯುವುದಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಇದೇ ವಿಚಾರವಾಗಿ ಈ ಹಿಂದೆ ಇತರೆ ಪಕ್ಷದವರು ಮಾಡಿದ ತಪ್ಪುಗಳನ್ನು ಪುನರಾವರ್ತಿಸುವ ಉದ್ದೇಶ ನಮ್ಮ ಪಕ್ಷಕ್ಕಿಲ್ಲ’ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರ ಮೇಲೆ ರಾಜ್ಯ ಸ್ಥಾನಮಾನ ನೀಡುವಿಕೆ ಅವಲಂಬಿತವಾಗಿದ್ದರೆ, ಬಿಜೆಪಿ ಅದನ್ನು ಪ್ರಮಾಣಿಕವಾಗಿ ಹೇಳಬೇಕು ಎಂದು ಒಮರ್ ತಿಳಿಸಿದ್ದಾರೆ.

ಜನರೊಂದಿಗೆ ಮಾಡಿಕೊಳ್ಳಬೇಕಾದ ಒಪ್ಪಂದ ಆಗಿದ್ದರೆ, ಬಿಜೆಪಿ ಪ್ರಾಮಾಣಿಕವಾಗಿರಬೇಕು. ಏಕೆಂದರೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹಾಗೂ ಸಂಸತ್ತು, ಸುಪ್ರೀಂ ಕೋರ್ಟ್‌ಗೆ ನೀಡಿದ ಭರವಸೆಗಳಲ್ಲಿ ರಾಜ್ಯ ಸ್ಥಾನಮಾನವು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರ ಮೇಲೆ ಅವಲಂಬಿತವಾಗಿದೆ ಎಂದು ಎಂದಿಗೂ ಹೇಳಿಲ್ಲ ಎಂದು ಅವರು ವಿವರಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ವಿಚಾರದಲ್ಲಿ ಬಿಜೆಪಿ ಪ್ರಾಮಾಣಿಕವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಹಾಗೆಯೇ ಕಾಶ್ಮೀರದಲ್ಲಿ ಬಿಜೆಪಿಯೇತರ ಸರ್ಕಾರ ಇರುವವರೆಗೆ ನಿಮಗೆ ರಾಜ್ಯ ಸ್ಥಾನಮಾನ ಸಿಗುವುದಿಲ್ಲ ಎಂದು ಅವರು (ಬಿಜೆಪಿಗರು) ಸ್ಪಷ್ಟಪಡಿಸಬೇಕು. ನಂತರ ನಾವು ಏನು ಮಾಡಬೇಕೆಂದು ನಿರ್ಧರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪಡೆಯುವ ಸಲುವಾಗಿ ತಮ್ಮ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದ್ದಾರೆ.

‘2015ರಲ್ಲಿ ಪಿಡಿಪಿ-ಬಿಜೆಪಿ ನಡುವಿನ ಅನಗತ್ಯ ಮೈತ್ರಿಯಿಂದಾದ ಪರಿಣಾಮಗಳನ್ನು ನಾವು ಇನ್ನೂ ಅನುಭವಿಸುತ್ತಿದ್ದೇವೆ. ಇತರರು ಮಾಡಿದ ತಪ್ಪುಗಳನ್ನು ಪುನರಾವರ್ತಿಸುವ ಉದ್ದೇಶ ನನಗಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.