ಲೋಕಸಭೆ (ಸಾಂಕೇತಿಕ ಚಿತ್ರ)
ಚೆನ್ನೈ: ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವುದಕ್ಕೆ ಸಂಬಂಧಿಸಿದ ನೋಟಿಸ್ ಅನ್ನು ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭೆಯಲ್ಲಿ ಸಲ್ಲಿಸುವ ಸಾಧ್ಯತೆಯಿದೆ.
ಮಧುರೈ ಬಳಿಯ ತಿರುಪರನ್‌ಕುಂಡ್ರಂ ಬೆಟ್ಟದ ಕಲ್ಲಿನ ದೀಪಸ್ತಂಭ ‘ದೀಪಥೋನ್’ನಲ್ಲಿ ಕಾರ್ತಿಕ ದೀಪ ಬೆಳಗಿಸಲು ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಅವರು ಭಕ್ತರಿಗೆ ಅವಕಾಶ ನೀಡಿ ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಅದೇ ಬೆಟ್ಟದಲ್ಲಿ ಸಿಕಂದರ್ ಬಾದುಶಾ ದರ್ಗಾ ಇದ್ದು, ಈ ಆದೇಶದಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಲಿದೆ ಎಂದು ಡಿಎಂಕೆ ಆತಂಕ ವ್ಯಕ್ತಪಡಿಸಿತ್ತು.
‘ತಮಿಳುನಾಡು ಮತ್ತು ಇತರ ರಾಜ್ಯಗಳ ಕಾಂಗ್ರೆಸ್ ಸಂಸದರು ನೋಟಿಸ್‌ಗೆ ಸಹಿ ಹಾಕಿದ್ದಾರೆ’ ಎಂದು ಮೂಲವೊಂದು ತಿಳಿಸಿದೆ. ನೋಟಿಸ್ ಸಲ್ಲಿಸಲು ಅಗತ್ಯವಿರುವ 100 ಸಂಸದರ ಬೆಂಬಲ ಸುಲಭವಾಗಿ ಸಿಗಲಿದೆ ಎಂಬ ವಿಶ್ವಾಸವನ್ನು ಡಿಎಂಕೆ ವ್ಯಕ್ತಪಡಿಸಿದೆ.
‘ಡಿಎಂಕೆ ಸಂಸದರು ವಿರೋಧ ಪಕ್ಷಗಳ ಸದಸ್ಯರ ಬೆಂಬಲವನ್ನೂ ಕೋರುತ್ತಿದ್ದಾರೆ. ಲೋಕಸಭೆಯಲ್ಲಿ ಮಂಡಿಸಲಿರುವ ನೋಟಿಸ್ಅನ್ನು ಎಲ್ಲಾ ಪಕ್ಷಗಳು ಬೆಂಬಲಿಸುವ ವಿಶ್ವಾಸವಿದೆ. ನೋಟಿಸ್‌ಗೆ ಸಹಿ ಹಾಕಿರುವ ಸಂಸದರ ನಿಖರ ಸಂಖ್ಯೆಯನ್ನು ಮಂಗಳವಾರ ಬೆಳಿಗ್ಗೆ ಹೇಳಲು ಸಾಧ್ಯ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.