ADVERTISEMENT

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 23:31 IST
Last Updated 11 ಮಾರ್ಚ್ 2020, 23:31 IST
ಜೋತಿರಾದಿತ್ಯ  ಸಿಂಧಿಯಾ ಅವರನ್ನು ಸ್ವಾಗತಿಸಿದ ನಡ್ಡಾ
ಜೋತಿರಾದಿತ್ಯ ಸಿಂಧಿಯಾ ಅವರನ್ನು ಸ್ವಾಗತಿಸಿದ ನಡ್ಡಾ   

ನವದೆಹಲಿ/ಭೋಪಾಲ್‌:ಮಧ್ಯಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆಗೆ ಸ್ಪ‍ರ್ಧಿಸಲು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿರೀಕ್ಷೆಯಂತೆ ಬಿಜೆಪಿ ಟಿಕೆಟ್‌ ನೀಡಲಾಗಿದೆ.

ಮಂಗಳವಾರ ಕಾಂಗ್ರೆಸ್‌ ತೊರೆದಿದ್ದ ಸಿಂಧಿಯಾ, ಬುಧವಾರ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಕೇವಲ ಎರಡು ಗಂಟೆ ಒಳಗೆ ರಾಜ್ಯಸಭೆ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು.

ಮಧ್ಯಪ್ರದೇಶದಿಂದ ಮೂರು ಸ್ಥಾನಗಳ ಭರ್ತಿಗಾಗಿ ದ್ವೈವಾರ್ಷಿಕ ಚುನಾವಣೆ ಮಾರ್ಚ್‌ 26ರಂದು ನಡೆಯಲಿದ್ದು, ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಚುನಾವಣೆ ಮೇಲೆಯೂ ಪರಿಣಾಮ ಬೀರಲಿದೆ.

ADVERTISEMENT

114 ಕಾಂಗ್ರೆಸ್‌ ಶಾಸಕರಲ್ಲಿ 22ಶಾಸಕರು ಸ್ಪೀಕರ್‌ ಅವರಿಗೆ ರಾಜೀನಾಮೆಸಲ್ಲಿಸಿದ್ದಾರೆ. ಇವರ ಬೆಂಬಲದೊಂದಿಗೆ ಸರ್ಕಾರ ರಚಿಸಲು ತಂತ್ರ ರೂಪಿಸುತ್ತಿರುವಬಿಜೆಪಿ, ರಾಜ್ಯಸಭೆಯ ಎರಡನೇ ಸ್ಥಾನವನ್ನು ಗೆಲ್ಲುವ ವಿಶ್ವಾಸ ಹೊಂದಿದೆ.

‘ಕಾಂಗ್ರೆಸ್‌ ಈಗ ಮೊದಲಿನಂತಿಲ್ಲ’
ಬಿಜೆಪಿ ಸೇರಿದ ಬಳಿಕ ಜ್ಯೋತಿರಾದಿತ್ಯ ಸಿಂಧಿಯಾ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

‘ಮೋದಿ ಅವರ ಆಡಳಿತದಲ್ಲಿ ದೇಶದ ಭವಿಷ್ಯ ಸುರಕ್ಷಿತವಾಗಿದೆ. ಜನರ ಸೇವೆ ಮಾಡಲು ಕಾಂಗ್ರೆಸ್‌ನಲ್ಲಿ ಅವಕಾಶ ದೊರೆಯಲಿಲ್ಲ. ಇದರಿಂದ, ಆ ಪಕ್ಷದಲ್ಲಿ ನೋವು ಮತ್ತು ಸಂಕಷ್ಟಗಳನ್ನು ಅನುಭವಿಸಿದೆ. ಕಾಂಗ್ರೆಸ್‌ ತಿರಸ್ಕಾರ ಮನೋಭಾವ ಹೊಂದಿದ್ದು, ಅದು ಈಗ ಮೊದಲಿನಂತೆ ಇಲ್ಲ‘ ಎಂದು ಟೀಕಿಸಿದ್ದಾರೆ.

’ಮಧ್ಯಪ್ರದೇಶ ಅಭಿವೃದ್ಧಿ ಬಗ್ಗೆ ನಾನು ಕಂಡಿದ್ದ ಕನಸುಗಳು ಕಳೆದ 18 ತಿಂಗಳಲ್ಲಿ ಛಿದ್ರವಾಗಿವೆ. ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಲಾಗಿತ್ತು. ಆದರೆ, 18 ತಿಂಗಳು ಕಳೆದರೂ ಸಾಧ್ಯವಾಗಿಲ್ಲ. ಹೊಸ ವಿಚಾರಗಳಿಗೆ ಕಾಂಗ್ರೆಸ್‌ ಮುಕ್ತ ಮನಸ್ಸು ಹೊಂದಿಲ್ಲ. ವಾಸ್ತವ ಸಂಗತಿಗಳನ್ನು ಅದು ಒಪ್ಪಿಕೊಳ್ಳುತ್ತಿಲ್ಲ. ಯುವ ನಾಯಕರಿಗೆ ಅವಕಾಶಗಳು ದೊರೆಯುತ್ತಿಲ್ಲ‘ ಎಂದು ಹೇಳಿದರು.

ಪಕ್ಷಕ್ಕೆ ಸಿಂಧಿಯಾ ಅವರನ್ನು ಬರಮಾಡಿಕೊಂಡ ಬಳಿಕ ಮಾತನಾಡಿದ ಅಧ್ಯಕ್ಷ ಜೆ.ಪಿ. ನಡ್ಡಾ, ’ಸಿಂಧಿಯಾ ಅವರು ತಮ್ಮ ಕುಟುಂಬವನ್ನು ಸೇರಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ’ಎಂದರು.

'ಸಿಂಧಿಯಾ ಅವರ ಅಜ್ಜಿ ರಾಜಮಾತಾ ವಿಜಯರಾಜೇ ಸಿಂಧಿಯಾ ಜನಸಂಘ ಹಾಗೂ ಬಿಜೆಪಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ
ನಿರ್ವಹಿಸಿದ್ದರು. ಅವರ ಮೊಮ್ಮಗ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವುದು ಸಂತಸ ತಂದಿದೆ' ಎಂದು ಅವರು ಹೇಳಿದರು.

’ಶಿವರಾಜ್‌, ಮಹಾರಾಜ ಒಗ್ಗಟ್ಟಾಗಿದ್ದಾರೆ‘
’ಮಧ್ಯಪ್ರದೇಶದಲ್ಲಿ ಮಹಾರಾಜ ಮತ್ತು ಶಿವರಾಜ ಈಗ ಒಗ್ಗಟ್ಟಾಗಿದ್ದಾರೆ...‘

ಬಿಜೆಪಿ ಹಿರಿಯ ನಾಯಕ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿರುವುದಕ್ಕೆ ನೀಡಿದ ಪ್ರತಿಕ್ರಿಯೆ ಇದು.

2018ರ ವಿಧಾನಸಭೆ ಚುನಾವಣೆಯಲ್ಲಿ ಸಿಂಧಿಯಾ ಅವರ ವಿರುದ್ಧ ಬಿಜೆಪಿ ವಿಭಿನ್ನ ರೀತಿಯ ಪ್ರಚಾರ ಕೈಗೊಂಡಿತ್ತು.

’ಮಾಫ್‌ ಕರೋ ಮಹಾರಾಜ, ಹಮಾರಾ ನೇತಾ ತೋ ಶಿವರಾಜ' (ಕ್ಷಮಿಸಿ ಮಹಾರಾಜ, ನಮ್ಮ ನಾಯಕ ಶಿವರಾಜ್‌) ಎನ್ನುವ ಘೋಷಣೆಗಳನ್ನು ಹಾಕಲಾಗಿತ್ತು. ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಬೆಂಬಲಿಗರು ಸಹ ಸಿಂಧಿಯಾ ಅವರನ್ನು ಮಹಾರಾಜ ಎಂದೇ ಕರೆಯುತ್ತಾರೆ.

’ಮಧ್ಯಪ್ರದೇಶದ ಕಾಂಗ್ರೆಸ್‌ನಲ್ಲಿ ಸಿಂಧಿಯಾ ಜನಪ್ರಿಯ ನಾಯಕರು. ಹೀಗಾಗಿ, ಕ್ಷಮಿಸಿ ಮಹಾರಾಜ ಎನ್ನುವ ಘೋಷಣೆ ಆರಂಭಿಸಲಾಗಿತ್ತು’ ಎಂದು ಚೌಹಾಣ್‌ ಹೇಳಿದರು.

*
ಬಿಜೆಪಿ ಪ್ರಜಾಪ್ರಭುತ್ದ ಕಗ್ಗೋಲೆ ಮಾಡುತ್ತಿದೆ. ಹಣ ಬಲದಿಂದ ಶಾಸಕರನ್ನು ಖರೀದಿಸುತ್ತಿದೆ. ಇದು ನಾಚಿಕೆಗೇಡಿತನದ ಸಂಗತಿ. ಸಿಂಧಿಯಾ ಅವರನ್ನು ಜನರು ಕ್ಷಮಿಸುವುದಿಲ್ಲ.
-ಅಶೋಕ್‌ ಗೆಹ್ಲೋಟ್‌, ರಾಜಸ್ಥಾನ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.