ADVERTISEMENT

ಕಾಳೇಶ್ವರಂ ಯೋಜನೆ ತನಿಖೆ: ‘ವಿಲನ್ ಮೊದಲು ಸಾಯುವುದಿಲ್ಲ’ ಎಂದ ರೇವಂತ್!

ಪಿಟಿಐ
Published 17 ಜುಲೈ 2025, 13:51 IST
Last Updated 17 ಜುಲೈ 2025, 13:51 IST
<div class="paragraphs"><p>ರೇವಂತ್ ರೆಡ್ಡಿ</p></div>

ರೇವಂತ್ ರೆಡ್ಡಿ

   

ನವದೆಹಲಿ: ಕಾಳೇಶ್ವರಂ ಏತ ನೀರಾವರಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ತನಿಖೆ ಪ್ರಗತಿಯಲ್ಲಿದ್ದು, ಈವರೆಗೆ ಕೇವಲ ಸಣ್ಣ ಮೀನುಗಳನ್ನು ಮಾತ್ರ ಹಿಡಿಯಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.

ತನಿಖೆ ಯಾವ ಹಂತದಲ್ಲಿದೆ ಎನ್ನುವ ಪ್ರಶ್ನೆಗೆ ಸಿನಿಮಾ ಸಾದೃಶ್ಯವನ್ನು ಉಲ್ಲೇಖಿಸಿ ರೆಡ್ಡಿ ಉತ್ತರಿಸಿದ್ದಾರೆ. ‘ಸಿನಿಮಾದಲ್ಲಿ ಯಾವತ್ತೂ ವಿಲನ್ ಮೊದಲಿಗೆ ಸಾಯುವುದಿಲ್ಲ. ನೀವು ಸಿನಿಮಾ ನೋಡುವುದಿಲ್ಲವೇ? ದೆಹಲಿ ಅಬಕಾರಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಕೊನೆಗೆ ಬಂಧಿಸಲಾಗಿತ್ತು’ ಎಂದು ರೆಡ್ಡಿ ಹೇಳಿದ್ದಾರೆ.

ADVERTISEMENT

ತನಿಖೆಯ ಭಾಗವಾಗಿ ನಡೆದ ದಾಳಿಯಲ್ಲಿ ಅಧಿಕಾರಿಗಳ ಮನೆಯಲ್ಲಿ ಹೆಚ್ಚಿನ ಆಸ್ತಿಗಳು ಪತ್ತೆಯಾಗಿವೆ. ನ್ಯಾಯಮೂರ್ತಿ ಪಿ.ಸಿ. ಘೋಷ್ ಸಮಿತಿ ನಿರಂತರವಾಗಿ ವಿಚಾರಣೆಗಳನ್ನು ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಹಾಗೂ ಸ್ಪಷ್ಟೀಕರಣಗಳು ಲಭ್ಯವಾಗುತ್ತಿವೆ ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಜೂನ್ 11 ರಂದು ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಮಾಜಿ ನೀರಾವರಿ ಸಚಿವ ಟಿ. ಹರೀಶ್ ರಾವ್ ಸೇರಿ ಎಂಜಿನಿಯರ್‌ಗಳು, ಅಧಿಕಾರಿಗಳು ಹಲವು ಬಾರಿ ಆಯೋಗದಿಂದ ವಿಚಾರಣೆಗೆ ಒಳಪಟ್ಟಿದ್ದಾರೆ.

ವಿಚಾರಣೆ ಪೂರ್ಣಗೊಳಿಸಲು ಘೋಷ್ ಆಯೋಗದ ಅವಧಿಯನ್ನು ಜುಲೈ 31, 2025ರವರೆಗೆ ವಿಸ್ತರಿಸಲಾಗಿದೆ.

ಪ್ರಕರಣದ ತನಿಖೆಯನ್ನು ಇ.ಡಿಗೆ ವರ್ಗಾಯಿಸಬೇಕು ಎನ್ನುವ ಬಿಜೆಪಿಯ ಆಗ್ರಹದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿಯವರು ಕೆಸಿಆರ್ ಅವರನ್ನು ರಕ್ಷಿಸಲು ಈ ಬೇಡಿಕೆ ಇಡುತ್ತಿದ್ದಾರೆ. ಹಾಗಿದ್ದರೆ ಫಾರ್ಮುಲ–ಇ ರೇಸ್ ಹಾಗೂ ಕುರಿ ಖರೀದಿಯಲ್ಲಿ ನಡೆದಿದೆ ಎನ್ನುವ ಭ್ರಷ್ಟಾಚಾರದ ಬಗ್ಗೆ ಇ.ಡಿ ತನಿಖೆ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.