ಕಮಲ್ ಹಾಸನ್ ಮತ್ತು ಪ್ರಧಾನಿ ಮೋದಿ
ನವದೆಹಲಿ: ರಾಜ್ಯಸಭೆ ಸದಸ್ಯ ಹಾಗೂ ಚಿತ್ರನಟ ಕಮಲ್ ಹಾಸನ್ ಅವರು ಇಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಕಮಲ್ ಹಾಸನ್ ಅವರು ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ನಂತರದ ಮೊದಲ ಭೇಟಿ ಇದಾಗಿದೆ.
ಪ್ರಧಾನಿ ಮೋದಿ ಭೇಟಿ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ನನಗೆ ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ಭೇಟಿಯಾಗುವ ಸೌಭಾಗ್ಯ ಸಿಕ್ಕಿತ್ತು. ತಮಿಳುನಾಡಿನ ಜನರ ಪ್ರತಿನಿಧಿಯಾಗಿ ಮತ್ತು ಕಲಾವಿದನಾಗಿ ಕೀಲಾದಿಯ ಪ್ರಾಚೀನತೆಯನ್ನು ಗುರುತಿಸುವಿಕೆ ಸೇರಿದಂತೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರಧಾನಿ ಬಳಿ ಮನವಿ ಮಾಡಿದ್ದೇನೆ’ ಎಂದು ತಿಳಿಸಿದ್ದಾರೆ.
‘ತಮಿಳು ನಾಗರಿಕತೆಯ ಶ್ರೇಷ್ಠತೆ ಮತ್ತು ತಮಿಳು ಭಾಷೆಯ ವೈಭವವನ್ನು ಜಗತ್ತಿಗೆ ಪ್ರದರ್ಶಿಸುವ ನಿಟ್ಟಿನಲ್ಲಿ ರಾಜ್ಯದ ಜನರಿಗೆ ಬೆಂಬಲ ನೀಡಬೇಕೆಂದು ಪ್ರಧಾನಿ ಮೋದಿ ಅವರ ಬಳಿ ಒತ್ತಾಯಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರವು, ಇಂಗ್ಲೆಂಡ್‌ನ ವಿಶ್ವವಿದ್ಯಾನಿಲಯವೊಂದು ಕೀಲಾಡಿಯಲ್ಲಿ ನಡೆಸಿದ ಪುರಾತತ್ವ ಶಾಸ್ತ್ರದ ಉತ್ಖನನ ವರದಿಯನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.