ADVERTISEMENT

ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ, ಬಿಜೆಪಿ ಜನರ ಹಾದಿ ತಪ್ಪಿಸುತ್ತಿದೆ: ಕಮಲನಾಥ್

ಪಿಟಿಐ
Published 20 ಅಕ್ಟೋಬರ್ 2020, 5:12 IST
Last Updated 20 ಅಕ್ಟೋಬರ್ 2020, 5:12 IST
ಕಮಲನಾಥ್ (ಪಿಟಿಐ ಚಿತ್ರ)
ಕಮಲನಾಥ್ (ಪಿಟಿಐ ಚಿತ್ರ)   

ಭೋಪಾಲ್: ‘ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ. ಬಿಜೆಪಿ ಹಾಗೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜನರ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಕಮಲನಾಥ್ ಹೇಳಿದ್ದಾರೆ.

ವಿಧಾನಸಭೆ ಉಪಚುನಾವಣೆ ಪ್ರಚಾರದ ಸಂದರ್ಭ ಮಧ್ಯಪ್ರದೇಶದ ಸಚಿವೆ ಇಮಾರತಿ ದೇವಿ ವಿರುದ್ಧ ಕಮಲನಾಥ್ ಅವರು ‘ಐಟಂ’ ಎಂಬ ಪದ ಬಳಸಿದ್ದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನಾನು ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ. ನೀವು (ಶಿವರಾಜ್ ಸಿಂಗ್ ಚೌಹಾಣ್) ಸುಳ್ಳುಗಳನ್ನು ಹೇಳುತ್ತಿದ್ದೀರಿ. ನಾನು ಹೇಳಿದ ಪದ ಅನೇಕ ಅರ್ಥಗಳನ್ನು ಹೊಂದಿದೆ. ನಿಮ್ಮ ಪಕ್ಷವು ಸುಳ್ಳುಗಳನ್ನು ಹೇಳುವುದಲ್ಲದೆ ಆ ಪದದ ಅರ್ಥವನ್ನು ತಿರುಚಿ ಜನರನ್ನು ಹಾದಿತಪ್ಪಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಳೆದ 7 ತಿಂಗಳ ಬಿಜೆಪಿ ಆಡಳಿತದ ಅವಧಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಈ ವಿಚಾರದಲ್ಲಿ ಮಧ್ಯಪ್ರದೇಶವು ಮತ್ತೊಮ್ಮೆ ಅಗ್ರ ಸ್ಥಾನಕ್ಕೇರುವತ್ತ ಸಾಗುತ್ತಿದೆ ಎಂದು ಕಮಲನಾಥ್ ಆರೋಪಿಸಿದ್ದಾರೆ.

‘ನಿಮ್ಮ 16 ವರ್ಷಗಳ ಆಡಳಿತದಲ್ಲಿ ಅತ್ಯಾಚಾರ ಹಾಗೂ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ರಾಜ್ಯವು ಅಗ್ರ ಸ್ಥಾನದಲ್ಲಿತ್ತು. ಆದರೆ ನೀವು ಮೌನ ವಹಿಸಿದ್ದಿರಿ’ ಎಂದು ಅವರು ಟೀಕಿಸಿದ್ದಾರೆ.

ದಬ್ರಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ಪರ ಭಾನುವಾರ ಪ್ರಚಾರ ಕೈಗೊಂಡಿದ್ದ ಕಮಲ್‌ ನಾಥ್‌, ‘ನಮ್ಮ ಅಭ್ಯರ್ಥಿ ಅತ್ಯಂತ ಸರಳ ವ್ಯಕ್ತಿ. ಅವರಂತೆ (ಇಮಾರತಿ ದೇವಿ) ಐಟಂ’ ಅಲ್ಲ ಎಂದು ಗೇಲಿ ಮಾಡಿದ್ದರು. ಈ ಕ್ಷೇತ್ರದಲ್ಲಿ ಇಮಾರತಿ ದೇವಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚೌಹಾಣ್, ಕಮಲನಾಥ್ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದರು. ಅಲ್ಲದೆ, ಕಮಲನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರವನ್ನೂ ಬರೆದಿದ್ದರು. ಇದಕ್ಕೂ ಮುನ್ನ ಬಿಜೆಪಿ 2 ಗಂಟೆ ಧರಣಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.