ADVERTISEMENT

...ಮತ್ತೊಂದು ಕೆನ್ನೆ ತೋರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ: ಕಂಗನಾ

ಪಿಟಿಐ
Published 16 ನವೆಂಬರ್ 2021, 16:33 IST
Last Updated 16 ನವೆಂಬರ್ 2021, 16:33 IST
   

ಮುಂಬೈ: 1947ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ‘ಭಿಕ್ಷೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರು, ಇದೀಗ ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಂತ್ರವನ್ನೇ ಗೇಲಿ ಮಾಡಿದ್ದಾರೆ.

ಸುಭಾಷ್‌ ಚಂದ್ರ ಬೋಸ್‌, ಭಗತ್‌ ಸಿಂಗ್‌ ಅವರಿಗೆ ಗಾಂಧೀಜಿ ಅವರಿಂದ ಬೆಂಬಲವೇ ಸಿಗಲಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎಂಬ ಗಾಂಧೀಜಿ ಅವರ ಮಂತ್ರ ಅನುಸರಿಸಿದರೆ ನಿಮಗೆ ಸ್ವಾತಂತ್ರ್ಯ ಸಿಗುವುದಿಲ್ಲ. ಭಿಕ್ಷೆ ಮಾತ್ರ ಸಿಗುತ್ತದೆ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ.

‘ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ’ ಎಂಬ ಒಕ್ಕಣೆಯನ್ನು ತಮ್ಮ ಪೋಸ್ಟ್‌ಗೆ ಸೇರಿಸಿದ್ದಾರೆ. ‌

ADVERTISEMENT

‘ನೇತಾಜಿಯನ್ನು ಹಸ್ತಾಂತರಿಸಲು ಗಾಂಧಿ ಮತ್ತು ಇತರರ ಸಮ್ಮಿತಿ’ ಎಂಬ ಶೀರ್ಷಿಕೆಯ ಹಳೆಯ ಪತ್ರಿಕೆಯೊಂದರ ವರದಿಯ ತುಣಕನ್ನು ಇನ್‌ಸ್ಟಾಗ್ರಾಂನಲ್ಲಿ ಅವರು ಮಂಗಳವಾರ ಹಂಚಿಕೊಂಡಿದ್ದಾರೆ. ‘ಜವಾಹರಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಗಾಂಧಿಯವರು ಬ್ರಿಟಿಷ್ ನ್ಯಾಯಾಧೀಶರೊಂದಿಗೆ ಒಪ್ಪಂದಕ್ಕೆ ಬಂದಿದ್ದಾರೆ. ಬೋಸ್‌ ಒಂದು ವೇಳೆ ಭಾರತ ಪ್ರವೇಶಿಸಿದರೆ ಅವರನ್ನು ಹಸ್ತಾಂತರಿಸಲು ಅವರು ಒಪ್ಪಿದ್ದಾರೆ,’ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ನೀವು ಗಾಂಧಿ ಮತ್ತು ನೇತಾಜಿಯನ್ನು ಒಟ್ಟಿಗೆ ಅಭಿಮಾನಿಸಲು ಸಾಧ್ಯವಿಲ್ಲ. ನಿರ್ಧರಿಸಿ ಆಯ್ಕೆ ಮಾಡಿಕೊಳ್ಳಿ. ವಿರೋಧಿಗಳನ್ನು ಎದುರಿಸಲಾಗದ, ಹೋರಾಡುವ ಬಿಸಿ ರಕ್ತವಿಲ್ಲದವರು, ಆದರೆ ಅಧಿಕಾರ ದಾಹಿಗಳಾಗಿದ್ದ ಕುತಂತ್ರಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ತಮ್ಮ ‘ಯಜಮಾನರಿಗೆ ಹಸ್ತಾಂತರಿಸಿದರು’ ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಬೇಕೆಂದು ಗಾಂಧೀಜಿ ಬಯಸಿದ್ದನ್ನು ಸೂಚಿಸುವ ಪುರಾವೆಗಳಿವೆ ಎಂದು ಅವರು ಹೇಳಿದ್ದಾರೆ.

‘ಯಾರಾದರೂ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಿ’ ಎಂದು ನಮಗೆ ಕಲಿಸಿದವರ ಪ್ರಕಾರ, ಮತ್ತೊಂದು ಕೆನ್ನೆ ತೋರಿಸಿದರೆ ಸ್ವಾತಂತ್ರ್ಯ ಸಿಗುವುದಿಲ್ಲ. ಭಿಕ್ಷೆ ಮಾತ್ರ ಸಿಗುತ್ತದೆ. ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ. ಜನರು ತಮ್ಮ ಇತಿಹಾಸ ಮತ್ತು ಅವರ ನಾಯಕರನ್ನು ಅರಿತುಕೊಳ್ಳುವ ಸಮಯ ಬಂದಿದೆ’ ಎಂದು ಕಂಗನಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಎರಡು ದಿನಗಳ ನಂತರ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಕಂಗನಾ, 1947ರ ಸ್ವಾತಂತ್ರ್ಯವನ್ನು ಭಿಕ್ಷೆ ಎಂದಿದ್ದರು.

ಅವರ ಈ ಹೇಳಿಕೆಗೆ ರಾಜಕಾರಣಿಗಳು, ಇತಿಹಾಸಕಾರರು, ಶಿಕ್ಷಣತಜ್ಞರು, ಸಹ ನಟರು ವಿರೋಧ ವ್ಯಕ್ತಪಡಿಸಿದ್ದರು. ಕಂಗನಾಗೆ ನೀಡಿದ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.