ADVERTISEMENT

ಬಿಜೆಪಿ ನೀತಿ ವಿರುದ್ಧ ‘ಕೈ’ ‘ನ್ಯಾಯ’ ಹೋರಾಟ: ಆರ್‌ಎಸ್‌ಎಸ್ ವಿರುದ್ಧ ಟೀಕಾಪ್ರಹಾರ

ವಿಸ್ತೃತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೂರು ನಿರ್ಣಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 23:30 IST
Last Updated 8 ಏಪ್ರಿಲ್ 2025, 23:30 IST
<div class="paragraphs"><p>ಕಾಂಗ್ರೆಸ್ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆ</p></div>

ಕಾಂಗ್ರೆಸ್ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆ

   

ನವದೆಹಲಿ: ತನ್ನ ಹುಸಿ ರಾಷ್ಟ್ರೀಯತೆಯ ಮೂಲಕ ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಆಡಳಿತ ಪಕ್ಷವು ಮಾಡುತ್ತಿರುವ ಘೋರ ಅನ್ಯಾಯ ಗಳನ್ನು ನ್ಯಾಯಮಾರ್ಗದ ಮೂಲಕ ಎದುರಿಸಲು ಸಜ್ಜಾಗಬೇಕು ಎಂದು ಕಾಂಗ್ರೆಸ್‌ ಕರೆ ನೀಡಿದೆ. ಈ ಮೂಲಕ, ಆಡಳಿತಾರೂಢ ಬಿಜೆಪಿ ವಿರುದ್ಧ ಆಕ್ರಮಣಕಾರಿ ಸೈದ್ಧಾಂತಿಕ ಹೋರಾಟಕ್ಕೆ ಅಣಿಯಾಗಿದೆ. 

ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಂಗಳವಾರ ನಡೆದ ಪಕ್ಷದ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.  ಸಿಡಬ್ಲ್ಯುಸಿ ಸಭೆಯಲ್ಲಿ ಗುಜರಾತ್ ಕುರಿತು ಒಂದು ನಿರ್ಣಯ ಮತ್ತು ರಾಷ್ಟ್ರೀಯ ವಿಷಯಗಳ ಕುರಿತು ಇನ್ನೊಂದು ನಿರ್ಣಯದ ಕುರಿತು ಚರ್ಚಿಸಲಾಗಿದೆ. ಬುಧವಾರ ನಡೆಯಲಿರುವ ಎಐಸಿಸಿ ಅಧಿವೇಶನ ದಲ್ಲಿ ಈ ನಿರ್ಣಯಗಳಿಗೆ ಅಂಗೀಕಾರ ಪಡೆಯಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ತಿಳಿಸಿದರು. 

ADVERTISEMENT

ನಕಲಿ ಮುಖಾಮುಖಿ ಮತ್ತು ದುರುದ್ದೇಶಪೂರಿತವಾಗಿ ಹೇಳಿಕೊಳ್ಳುವ ವಿಭಜನೆಯ ಸಿದ್ಧಾಂತವು ಸರ್ದಾರ್ ಪಟೇಲ್ ಮತ್ತು ಜವಾಹರಲಾಲ್ ನೆಹರೂ ನಡುವಿನ ಸಂಘರ್ಷದ ಬಗ್ಗೆ ಉದ್ದೇಶಪೂರ್ವಕ ಸುಳ್ಳುಗಳ ಜಾಲ ಹರಡಲು ಕಾರಣವಾಯಿತು ಎಂದು ಪಕ್ಷವು ನಿರ್ಣಯದಲ್ಲಿ ತಿಳಿಸಿದೆ. ‘ವಾಸ್ತವದಲ್ಲಿ ಈ ಸುಳ್ಳು ನಮ್ಮ ಸ್ವಾತಂತ್ರ್ಯ ಹೋರಾಟದ ನೀತಿ ಮತ್ತು ಗಾಂಧಿ-ನೆಹರೂ-ಪಟೇಲ್ ಅವರ ಬೇರ್ಪಡಿಸಲಾಗದ ನಾಯಕತ್ವದ ಮೇಲಿನ ದಾಳಿಯಾಗಿದೆ. ದ್ವೇಷ ಮತ್ತು ವಿಭಜನೆಯ ಶಕ್ತಿಗಳಿಂದು ಈ ಸೌಹಾರ್ದದ ಮತ್ತು ಸ್ನೇಹಪರತೆಯ ಮನೋಭಾವವನ್ನೇ ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ’ ಎಂದು ಪಕ್ಷ ಹೇಳಿದೆ. 

ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ‘ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ನಿರ್ಣಯ ಅಂಗೀಕರಿಸಲಾಗಿದೆ’ ಎಂದು ಹೇಳಿದರು.

ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದ ಪಕ್ಷವು ಹಿಂಸಾಚಾರ ಹಾಗೂ ಕೋಮುವಾದವು ದೇಶವನ್ನು ದ್ವೇಷದ ಪ್ರಪಾತಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದೆ. ಧಾರ್ಮಿಕ ಧ್ರುವೀಕರಣದ ಉನ್ಮಾದದ ​​ವಿರುದ್ಧ ಹೋರಾಡುವ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಢನಿಶ್ಚಯವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪಕ್ಷ
ಘೋಷಿಸಿದೆ.

ಗಾಂಧಿ, ಪಟೇಲ್‌ ಪರಂಪರೆ ಕದಿಯುತ್ತಿರುವ ಬಿಜೆಪಿ: ಖರ್ಗೆ 

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ರಾಷ್ಟ್ರೀಯ ವೀರರ ವಿರುದ್ಧ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಯೋಜಿತ ಪಿತೂರಿ ನಡೆಸುತ್ತಿವೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. 

ಅಹಮದಾಬಾದ್‌ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಪಕ್ಷದ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉದ್ಘಾಟನಾ ಮಾತುಗಳನ್ನಾಡಿದ ಅವರು, ‘ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸಿದ್ಧಾಂತವು ಆರ್‌ಎಸ್‌ಎಸ್‌ನ ವಿಚಾರಗಳಿಗೆ ವಿರುದ್ಧವಾಗಿದೆ. ಅವರು ಆರ್‌ಎಸ್‌ಎಸ್‌ಗೆ ನಿಷೇಧ ಹೇರಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡಿರದ ಆ ಸಂಘಟನೆಯು ಸರ್ದಾರ್ ಅವರ ಪರಂಪರೆಯನ್ನು ಬಿಂಬಿಸಿಕೊಳ್ಳುತ್ತಿರುವುದು ನಗೆಪಾಟಲಿಗೆ ಕಾರಣವಾಗಿದೆ’ ಎಂದರು. 

ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರ ಪರಂಪರೆಯನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕದಿಯುತ್ತಿವೆ ಎಂದು ಅವರು ಆರೋಪಿಸಿದರು. ಅವರ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಮುಂದಕ್ಕೆ ಕೊಂಡೊಯ್ಯಲು ಸಂಘಟನೆಯನ್ನು ಬಲಪಡಿಸುವಂತೆ ಕರೆ ನೀಡಿದರು. ಪಟೇಲ್ ಅವರನ್ನು ಉಲ್ಲೇಖಿಸಿದ ಅವರು, ಸಂಘಟನೆಯಿಲ್ಲದೆ ಸಂಖ್ಯಾಬಲವು ಅರ್ಥಹೀನ ಎಂದು ಹೇಳಿದರು. ಗಾಂಧೀಜಿಯವರ ಸೈದ್ಧಾಂತಿಕ ಪರಂಪರೆಯೇ ಕಾಂಗ್ರೆಸ್ ಹೊಂದಿರುವ ನಿಜವಾದ ಬಂಡವಾಳ ಎಂದು ಅಭಿಪ್ರಾಯಪಟ್ಟರು. 

‘ಕೋಮು ವಿಭಜನೆಯಲ್ಲಿ ತೊಡಗುವ ಮೂಲಕ ಇಂದು ದೇಶದ ಮೂಲಭೂತ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ' ಎಂದು ಅವರು ದೂರಿದರು.

ಮೋದಿ ಸರ್ಕಾರವು ಗಾಂಧೀಜಿ ಮತ್ತು ಬಾಬಾ ಸಾಹೇಬರ ಭವ್ಯ ಪ್ರತಿಮೆಗಳನ್ನು ಸಂಸತ್ತಿನ ಆವರಣದಿಂದ ತೆಗೆದು ಮೂಲೆಯಲ್ಲಿ ಇರಿಸುವ ಮೂಲಕ ಅವಮಾನಿಸಿದೆ ಎಂದು ಅವರು ಆರೋಪಿಸಿದರು.

ಜಿಲ್ಲಾ ಘಟಕಗಳಿಗೆ ಹೆಚ್ಚಿನ ಅಧಿಕಾರ: ಪೈಲಟ್‌ 

ಪಕ್ಷದ ಜಿಲ್ಲಾ ಘಟಕಗಳಿಗೆ ಹೆಚ್ಚಿನ ಅಧಿಕಾರ ನೀಡಿ ಹೊಣೆಗಾರಿಕೆ ನಿಗದಿ‍ಪಡಿಸಲು ಪಕ್ಷ ಉದ್ದೇಶಿಸಿದೆ ಎಂದು ಎಐಸಿಸಿ ‍ಪ್ರಧಾನ ಕಾರ್ಯದರ್ಶಿ ಸಚಿನ್‌ ಪೈಲಟ್‌ ತಿಳಿಸಿದರು. 

ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವು ಮುಂಬರುವ ಚುನಾವಣೆಗಳನ್ನು ಹೆಚ್ಚಿನ ಬಲದಿಂದ ಹಾಗೂ ಸಂಘಟಿತವಾಗಿ ಎದುರಿಸಲಿದೆ ಎಂದು ಪ್ರತಿಪಾದಿಸಿದರು. ಬಿಜೆಪಿ ಹಾಗೂ ಎನ್‌ಡಿಎಗೆ ಕಠಿಣ ಸವಾಲು ನೀಡಲು ಕಾಂಗ್ರೆಸ್‌ ಹಾಗೂ ಬೆಂಬಲಿತ ಸಿದ್ಧಾಂತಗಳು ಜತೆಗೂಡಿ ಕೆಲಸ ಮಾಡಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಸಬಲೀಕೃತ ಜಿಲ್ಲಾ ಘಟಕಗಳನ್ನು ರಚಿಸುವುದು ಖರ್ಗೆ ಹಾಗೂ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಉದ್ದೇಶ. ಈ ಮೂಲಕ ಹಳ್ಳಿಗಳು, ವಿಭಾಗಗಳು ಮತ್ತು ಬೂತ್‌ಗಳಲ್ಲಿ ಪಕ್ಷದ ವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ’ ಎಂದರು. 

ಪ್ರಿಯಾಂಕಾ ಗಾಂಧಿ ಗೈರು 

ಎರಡು ದಿನಗಳ ಎಐಸಿಸಿ ಅಧಿವೇಶನಕ್ಕೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗೈರುಹಾಜರಾಗಿದ್ದಾರೆ. 

ವೈದ್ಯಕೀಯ ಸಹಾಯದ ಅಗತ್ಯವಿರುವ ಸಂಬಂಧಿಕರನ್ನು ನೋಡಿಕೊಳ್ಳುವ ಉದ್ದೇಶದಿಂದ  ಅವರು ವಿದೇಶಕ್ಕೆ ತೆರಳಿದ್ದಾರೆ. ‘ಸಂಸತ್‌ನ ಬಜೆಟ್‌ ಅಧಿವೇಶನದ ಕೊನೆಯ ಭಾಗ ಹಾಗೂ ಎಐಸಿಸಿ ಅಧಿವೇಶನಕ್ಕೆ ಗೈರುಹಾಜರಾಗಲು ಅವರು ಎಐಸಿಸಿ ಅಧ್ಯಕ್ಷರಿಂದ ಅನುಮತಿ ಪಡೆದಿದ್ದರು’ ಎಂದು ಕೆ.ಸಿ.ವೇಣುಗೋಪಾಲ್ ತಿಳಿಸಿದರು.  ವಕ್ಫ್ (ತಿದ್ದುಪಡಿ) ಮಸೂದೆ 2025 ರ ಚರ್ಚೆ ಮತ್ತು ಮತದಾನದ ಸಮಯದಲ್ಲಿ ಪ್ರಿಯಾಂಕಾ ಅವರು ಲೋಕಸಭೆಯಲ್ಲಿ ಗೈರುಹಾಜರಾಗಿರುವುದು ವಿವಾದಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.