ADVERTISEMENT

Republic Day Parade | ಕಣ್ಮನ ಸೆಳೆದ ಕರ್ನಾಟಕದ ‘ಲಕ್ಕುಂಡಿ’ ಸ್ತಬ್ಧಚಿತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜನವರಿ 2025, 8:02 IST
Last Updated 26 ಜನವರಿ 2025, 8:02 IST
<div class="paragraphs"><p> ಕರ್ನಾಟಕದ ‘ಲಕ್ಕುಂಡಿ’ ಸ್ತಬ್ಧಚಿತ್ರ</p></div>

ಕರ್ನಾಟಕದ ‘ಲಕ್ಕುಂಡಿ’ ಸ್ತಬ್ಧಚಿತ್ರ

   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಹಿರಿಮೆ ಸಾರುವ ‘ಲಕ್ಕುಂಡಿ’ಯ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು.

‘ಲಕ್ಕುಂಡಿ’ಯ ಸ್ತಬ್ಧಚಿತ್ರ ಕರ್ತವ್ಯಪಥದಲ್ಲಿ ಸಾಗುವುದರೊಂದಿಗೆ ಕರ್ನಾಟಕದ ಹಿರಿಮೆ, ಸರ್ವಧರ್ಮ ಸಮನ್ವಯ, ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಿದೆ.

ADVERTISEMENT

ಸ್ತಬ್ಧಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಅದರ ನಂತರ ಬ್ರಹ್ಮ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ. ಸ್ತಬ್ಧಚಿತ್ರದ ಮುಖ್ಯ ವಿಭಾಗವು ಭವ್ಯವಾದ ಮತ್ತು ಅಲಂಕೃತವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಪ್ರದರ್ಶಿಸುತ್ತಿದೆ.

ಕಲಾನಿರ್ದೇಶಕ ಶಶಿಧರ ಅಡಪ ಅವರು ಸ್ತಬ್ಧಚಿತ್ರದ ಮಾದರಿಯನ್ನು ವಿನ್ಯಾಸ ಮಾಡಿಕೊಟ್ಟಿದ್ದಾರೆ. ಮೈಸೂರು, ಬೆಂಗಳೂರು, ಗದಗ ಮತ್ತು ಧಾರವಾಡದ ಕಲಾವಿದರಿಂದ ಕೂಡಿರುವ 18 ಮಂದಿ ತಂಡವನ್ನು ಕಲಾವಿದರಾದ ಲಿಂಗಯ್ಯ ಅವರು ಮುನ್ನಡೆಸಿದ್ದಾರೆ. ಸ್ತಬ್ಧಚಿತ್ರದ ಇಕ್ಕೆಲಗಳಲ್ಲಿ ತಲಾ ನಾಲ್ಕು ಮಂದಿ ಮಹಿಳೆಯರು ಮತ್ತು ಪುರುಷರು ಜಗ್ಗಲಿಗೆ ಬಾರಿಸುತ್ತಾ ಮುನ್ನಡೆಸಿದ್ದಾರೆ. ಇನ್ನುಳಿದ 10 ಮಂದಿ ಸ್ತಬ್ಧಚಿತ್ರದ ಮೇಲುಭಾಗದಲ್ಲಿ ಪ್ರವಾಸಿಗರಾಗಿ ಕಾಣಿಸಿಕೊಂಡಿದ್ದಾರೆ.

ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ. ಈ ದೇಗುಲಗಳು ಕಲಾತ್ಮಕತೆಯಿಂದ ಕಂಗೊಳಿಸುವ ಕಾರಣ, ಸ್ತಬ್ಧಚಿತ್ರಕ್ಕೆ ಲಕ್ಕುಂಡಿಯ ಶಿಲ್ಪಕಲೆಯನ್ನೇ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.