ADVERTISEMENT

ಕರೂರು ಕಾಲ್ತುಳಿತ ಪ್ರಕರಣ: ಸ್ಟಾಲಿನ್, ವಿಜಯ್‌ ಜತೆ ಮಾತನಾಡಿದ ರಾಹುಲ್ ಗಾಂಧಿ

ಪಿಟಿಐ
Published 29 ಸೆಪ್ಟೆಂಬರ್ 2025, 9:05 IST
Last Updated 29 ಸೆಪ್ಟೆಂಬರ್ 2025, 9:05 IST
<div class="paragraphs"><p>ಎಂ.ಕೆ. ಸ್ಟಾಲಿನ್, ರಾಹುಲ್ ಗಾಂಧಿ, ವಿಜಯ್</p></div>

ಎಂ.ಕೆ. ಸ್ಟಾಲಿನ್, ರಾಹುಲ್ ಗಾಂಧಿ, ವಿಜಯ್

   

ನವದೆಹಲಿ: ತಮಿಳುನಾಡಿನ ಕರೂರು ಬಳಿ ಶನಿವಾರ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಜತೆಗೆ ದುರಂತದಲ್ಲಿ ಮಡಿದವರಿಗೆ ಸಂತಾಪ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಅವರು ಕರೆ ಮಾಡಿ ಮಾತನಾಡಿದ ವಿಷಯವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸ್ಟಾಲಿನ್ ಹಂಚಿಕೊಂಡಿದ್ದಾರೆ.

ADVERTISEMENT

‘ದೂರವಾಣಿ ಮೂಲಕ ಸಂಪರ್ಕಿಸಿದ ನೀವು, ಕರೂರು ದುರಂತದಲ್ಲಿ ಮಡಿದವರು ಹಾಗೂ ಅವರ ಕುಟುಂಬದವರಿಗಾಗಿ ಕಾಳಜಿ ವ್ಯಕ್ತಿಪಡಿಸಿದ್ದೀರಿ. ಅದಕ್ಕಾಗಿ ತಮಗೆ ಧನ್ಯವಾದಗಳು. ಘಟನೆ ಕುರಿತು ಪ್ರಾಮಾಣಿಕವಾಗಿ ತನಿಖೆ ನಡೆಸಲಾಗುತ್ತಿದೆ. ಬದುಕುಳಿದವರ ಅಮೂಲ್ಯ ಜೀವ ರಕ್ಷಣೆಗೆ ಎಲ್ಲಾ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ’ ಎಂದು ರಾಹುಲ್ ಗಾಂಧಿಗೆ ಸ್ಟಾಲಿನ್ ಹೇಳಿದ್ದಾರೆ.

‘ಟಿವಿಕೆ ಪಕ್ಷದ ಕಾರ್ಯಕರ್ತರ ಸಾವಿನ ಕುರಿತು ಪಕ್ಷದ ಅಧ್ಯಕ್ಷ ವಿಜಯ್ ಅವರಿಗೆ ಕರೆ ಮಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಂತಾಪಗಳನ್ನು ತಿಳಿಸಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಸೆ. 27ರಂದು ಪಕ್ಷದ ರ‍್ಯಾಲಿ ಆಯೋಜನೆಗೊಂಡಿತ್ತು. ಈ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 40 ಜನ ಮೃತಪಟ್ಟಿದ್ದಾರೆ. 60 ಜನ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಸಂಬಂಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿರುವ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು, ಸಿಬಿಐ ಅಥವಾ ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಕೋರಿದೆ. ದುರಂತದಲ್ಲಿ ಮಡಿದ ಕುಟುಂಬಗಳಿಗೆ ತಲಾ ₹20 ಲಕ್ಷ ನೀಡುವುದಾಗಿ ವಿಜಯ್ ಘೋಷಿಸಿದ್ದಾರೆ. 

ಕಾರ್ಯಕ್ರಮ ಆಯೋಜನೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಟಿವಿಕೆ ಪಕ್ಷದ ಮುಖಂಡರ ವಿರುದ್ಧ ಕರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಧಿವಿಜ್ಞಾನ ತಜ್ಞರು ತನಿಖೆ ಆರಂಭಿಸಿದ್ದಾರೆ. ಶವಗಳು ಪತ್ತೆಯಾದ ಚರಂಡಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. 

ಕರೂರು‌ನಲ್ಲಿ ಸಂಭವಿಸಿದ ಈ ದುರಂತದಲ್ಲಿ ಮಡಿದವರಿಗೆ ಗೌರವಾರ್ಥವಾಗಿ ಪಟ್ಟಣದ ವರ್ತಕರು ತಮ್ಮ ಮಳಿಗೆಗಳನ್ನು ಸೋಮವಾರ ಬಂದ್ ಮಾಡಿದರು.

ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿ ಘೊಷಿಸಿದ್ದಾರೆ. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಮತ್ತು ಗಾಯಗೊಂಡವರಿಗೆ ₹1 ಲಕ್ಷ ಪರಿಹಾರ ಘೋಷಿಸಿದೆ.

ಕಾಂಗ್ರೆಸ್ ಪಕ್ಷದ ತಮಿಳುನಾಡು ಘಟಕದಿಂದ ಕುಟುಂಬಗಳಿಗೆ ₹1 ಕೋಟಿ ಮತ್ತು ಬಿಜೆಪಿ ವತಿಯಿಂದ ತಲಾ ₹1 ಲಕ್ಷ ಪರಿಹಾರ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.