ADVERTISEMENT

ಹೆದ್ದಾರಿ ಬಂದ್: ಶೇ 40ರಷ್ಟು ಬೆಲೆ ಕುಸಿತ, ಕಾಶ್ಮೀರದ ಸೇಬು ಬೆಳೆಗಾರರಿಗೆ ತೊಂದರೆ

ಝುಲ್ಫೀಕರ್ ಮಜೀದ್
Published 21 ಸೆಪ್ಟೆಂಬರ್ 2025, 6:43 IST
Last Updated 21 ಸೆಪ್ಟೆಂಬರ್ 2025, 6:43 IST
<div class="paragraphs"><p>ಕಾಶ್ಮೀರದ ಸೇಬು</p></div>

ಕಾಶ್ಮೀರದ ಸೇಬು

   

ಶ್ರೀನಗರ: ಆಗಸ್ಟ್ ಅಂತ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ ಮೂರು ವಾರಗಳ ಕಾಲ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ್ದರ ಪರಿಣಾಮ ಕಾಶ್ಮೀರದಿಂದ ಸೇಬು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಶೇ 40ರಷ್ಟು ಬೆಲೆ ಕುಸಿದಿದ್ದು, ಸೇಬು ಬೆಳೆಗಾರರಿಗೆ ತೀವ್ರ ತೊಂದರೆಯಾಗಿದೆ.

ಹೆದ್ದಾರಿ ಬಂದ್‌ ಮಾಡಿದ್ದರ ಪರಿಣಾಮ ಟ್ರಕ್‌ಗಳಲ್ಲಿ ತುಂಬಿದ್ದ ಹಣ್ಣುಗಳು ಕೊಳೆತು ಹೋಗಿವೆ. ಜತೆಗೆ, ಕೇಂದ್ರ ಸರ್ಕಾರ ಕಣಿವೆ ರಾಜ್ಯದ ಹಣ್ಣಿನ ಆರ್ಥಿಕತೆಯನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸುತ್ತಿದೆ ಎಂದು ಬೆಳೆಗಾರರು ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

ಸೇಬು ವಹಿವಾಟು ಉತ್ತುಂಗದಲ್ಲಿರುವಾಗಲೇ ಹೆದ್ದಾರಿ ದಿಗ್ಬಂಧನವು ಕಾಶ್ಮೀರದ ತೋಟಗಾರಿಕಾ ವಲಯವನ್ನು ವಿಕೋಪಕ್ಕೆ ತಳ್ಳಿದಂತಾಗಿದೆ. ಕೃಷಿಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ಕಾಶ್ಮೀರದ ಆರ್ಥಿಕತೆಯು ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ಗರಿಷ್ಠ ಕೊಯ್ಲಿನ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಆಗಾಗ್ಗೆ ಬಂದ್‌ ಮಾಡುತ್ತಿರುವುದರಿಂದ ಭಾರಿ ಹೊಡೆತ ಬಿದ್ದಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಕಾಶ್ಮೀರದಲ್ಲಿ ವಾರ್ಷಿಕ 20 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಸೇಬು ಬೆಳೆಯಲಾಗುತ್ತದೆ. ಇದು ಭಾರತದ ಸೇಬು ಉತ್ಪಾದನೆಯ ಶೇ 70ರಷ್ಟಿದೆ. ಕಾಶ್ಮೀರದಿಂದ ಸೇಬುಗಳನ್ನು ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಕೋಲ್ಕತ್ತ ಮತ್ತು ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.

‘ನಮ್ಮ ಟ್ರಕ್‌ಗಳನ್ನು ನಿಲ್ಲಿಸುವುದು ಇದೇ ಮೊದಲಲ್ಲ. ಪ್ರತಿ ವರ್ಷ ಸೇಬು ಮಾರುಕಟ್ಟೆಗೆ ಪ್ರವೇಶಿಸುವುದಕ್ಕೆ ಸಿದ್ಧವಾದಾಗ ಇದೇ ರೀತಿ ಆಗುತ್ತಿದೆ. ಈಗೀನ ಪರಿಸ್ಥಿತಿ ಅಸಹನೀಯವಾಗಿದೆ’ ಎಂದು ಆಲ್ ಕಾಶ್ಮೀರ್ ಫ್ರೂಟ್ ಗ್ರೋವರ್ಸ್ ಯೂನಿಯನ್ ಅಧ್ಯಕ್ಷ ಬಶೀರ್ ಅಹ್ಮದ್ ಬಶೀರ್ ಬೇಸರ ಹೊರಹಾಕಿದ್ದಾರೆ.

ಈಚೆಗೆ ಬಾರಾಮುಲ್ಲಾ ಮತ್ತು ಕುಪ್ವಾರಾದಲ್ಲಿ ಹಣ್ಣಿನ ಉದ್ಯಮವನ್ನೇ ನೆಚ್ಚಿಕೊಂಡಿರುವ ಹಲವರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.