ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿವಾಸಿ ಕಲ್ಯಾಣ ಸಂಘಗಳ (ಆರ್‌ಡಬ್ಲ್ಯೂಎ) ಮೂಲಕ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸರ್ಕಾರವು ಹಣಕಾಸಿನ ನೆರವು ಒದಗಿಸುತ್ತದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ಮಾಜಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.
ಇಲ್ಲಿ ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಎಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಜನರ ಅಭಿವೃದ್ದಿ ಸೇರಿದಂತೆ ಭದ್ರತೆಯ ಹಿತದೃಷ್ಟಿಯಿಂದ ಸರ್ಕಾರೇತರ ಸಂಸ್ಥೆ ಆರ್‌ಡಬ್ಲ್ಯೂಎಗಳ ಮೂಲಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಿವಾಸಿ ಕಲ್ಯಾಣ ಸಂಘಗಳಿಗೆ ಹಣಕಾಸಿನ ನೆರವು ಒದಗಿಸಲಾಗುವುದು. ಆರ್‌ಡಬ್ಲ್ಯುಎಗಳ ಸಿಬ್ಬಂದಿಯು ಅಭಿವೃದ್ದಿ ಯೋಜನೆಗಳು, ಭದ್ರತೆ ಸೇರಿದಂತೆ ಜನರ ಹಿತರಕ್ಷಣೆಗೆ ಹೆಚ್ಚಿನ ಗಮನಹರಿಸಲಿದ್ದು, ಸರ್ಕಾರಿ ಯೋಜನೆಗಳ ಜಾರಿಗೆ ನೆರವಾಗುತ್ತಾರೆ. ಈ ಮೂಲಕ ಜನರ ಯೋಗಕ್ಷೇಮವೇ ಎಎಪಿ ಪಕ್ಷದ ಮೊದಲ ಆದ್ಯತೆಯಾಗಿದೆ. ಆರ್‌ಡಬ್ಲ್ಯೂಎ ನೇಮಕ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೆಹಲಿ ಜನರ ಹಿತರಕ್ಷಣೆಯನ್ನು ಕಡೆಗಣಿಸಿದೆ ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಚುನಾವಣೆ ನಡೆಯಲಿದ್ದು. ಫೆಬ್ರುವರಿ 8ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.