ADVERTISEMENT

ಚರ್ಚೆಗೆ ನಾನೂ ರೆಡಿ: ಡೇಟ್–ಟೈಮ್ ಹೇಳಿ ಸಾಕು; ವೇಣುಗೋಪಾಲ್‌ಗೆ ಪಿಣರಾಯಿ ಡಿಚ್ಚಿ

ಪಿಟಿಐ
Published 7 ಡಿಸೆಂಬರ್ 2025, 13:20 IST
Last Updated 7 ಡಿಸೆಂಬರ್ 2025, 13:20 IST
<div class="paragraphs"><p>ಪಿಣರಾಯಿ ವಿಜಯನ್ ಮತ್ತು&nbsp;ಕೆ.ಸಿ. ವೇಣುಗೋಪಾಲ್</p></div>

ಪಿಣರಾಯಿ ವಿಜಯನ್ ಮತ್ತು ಕೆ.ಸಿ. ವೇಣುಗೋಪಾಲ್

   

ತಿರುವನಂತಪುರ: ‘ಸಂಸತ್ತಿನಲ್ಲಿ ರಾಜ್ಯದ ಯುಡಿಎಫ್ ಸಂಸದರ ಕಾರ್ಯಕ್ಷಮತೆಯ ಕುರಿತು ಸಾರ್ವಜನಿಕ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅದಕ್ಕಾಗಿ ಸ್ಥಳ ಮತ್ತು ಸಮಯ ನಿಗದಿಪಡಿಸಲು ನೀವು ಸಿದ್ಧರಿದ್ದೀರಾ’ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುಗೇಟು ಕೊಟ್ಟಿದ್ದಾರೆ.

‘ಯುಡಿಎಫ್ ಸಂಸದರು ಕೇರಳದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವಲ್ಲಿ ವಿಫಲರಾಗಿದ್ದಾರೆ. ಹಲವು ಸಂದರ್ಭಗಳಲ್ಲಿ ರಾಜ್ಯದ ಹಿತಾಸಕ್ತಿಗಳ ವಿರುದ್ಧ ನಿಲುವುಗಳನ್ನು ತೆಗೆದುಕೊಂಡಿದ್ದಾರೆ’ ಎಂದು ಅಲಪ್ಪುಳ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಇತ್ತೀಚೆಗೆ ಟೀಕಿಸಿದ್ದರು.

ADVERTISEMENT

‘ಯುಡಿಎಫ್ ಸಂಸದರು ಕಾರ್ಯ ವೈಖರಿ ಕುರಿತು ಮುಕ್ತ ಚರ್ಚೆಗೆ ವಿಜಯನ್ ಅವರು ಸಿದ್ಧರಿದ್ದಾರೆಯೇ’ ಎಂದು ವೇಣುಗೋಪಾಲ್ ಪ್ರಶ್ನಿಸಿದ್ದರು. ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿಎಂ ಪ್ರತಿಕ್ರಿಯಿಸಿದ್ದಾರೆ.

‘ನಮ್ಮ ಸಂಸದರ ಕಾರ್ಯಕ್ಷಮತೆಯ ಬಗ್ಗೆ ವೇಣುಗೋಪಾಲ್ ಅವರಿಗೆ ತಿಳಿದಿಲ್ಲವೇ? ಹಾಗಾದರೆ, ಖಂಡಿತ ನಾನು ಅವರೊಂದಿಗೆ ಮುಕ್ತ ಚರ್ಚೆಗೆ ಸಿದ್ಧನಿದ್ದೇನೆ. ಅವರೇ, ಸಮಯ ಮತ್ತು ಸ್ಥಳವನ್ನು ನಿರ್ಧರಿಸಲಿ’ ಎಂದು ಹೇಳಿದ್ದಾರೆ.

‘ಕೇರಳ ವಿರುದ್ಧ ನಿಲುವು ತೆಗೆದುಕೊಳ್ಳುವಂತೆ ಕಾಂಗ್ರೆಸ್‌ ನಾಯಕರೇ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಕೇರಳವನ್ನು ಬಡತನ ಮುಕ್ತ ರಾಜ್ಯವೆಂದು ಘೋಷಿಸಿದ ನಂತರ ವಿರೋಧ ಪಕ್ಷದ ಸಂಸದರು ಸಂಸತ್ತಿನಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತುವ ಮೂಲಕ ರಾಜ್ಯದ ಎಲ್ಲಾ ಪಡಿತರ ಚೀಟಿಗಳನ್ನು (ಅಂತ್ಯೋದಯ ಅನ್ನ ಯೋಜನೆ) ರದ್ದುಗೊಳಿಸಲು ಪ್ರಯತ್ನಿಸಿದ್ದಾರೆ’ ಎಂದು ಪಿಣರಾಯಿ ವಿಜಯನ್ ಗುಡುಗಿದ್ದಾರೆ.