
ತಿರುವನಂತಪುರ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (ಎನ್‌ಡಿಎ) ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ ಪೋಸ್ಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
‘ತಿರುವನಂತಪುರಕ್ಕೆ ಧನ್ಯವಾದಗಳು! ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪಡೆದ ಬಹುಮತವು ಕೇರಳ ರಾಜಕೀಯದಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ರಾಜ್ಯದ ಅಭಿವೃದ್ಧಿಯ ಆಕಾಂಕ್ಷೆಗಳನ್ನು ನಮ್ಮ ಪಕ್ಷದಿಂದ ಮಾತ್ರ ಪೂರೈಸಲು ಸಾಧ್ಯ ಎಂದು ಜನರಿಗೆ ಖಚಿತವಾಗಿದೆ. ನಮ್ಮ ಪಕ್ಷವು ಈ ರೋಮಾಂಚಕ ನಗರದ ಬೆಳವಣಿಗೆಗೆ ಕೆಲಸ ಮಾಡುತ್ತದೆ ಮತ್ತು ಜನರಿಗೆ ಜೀವನವನ್ನು ಸುಲಭಗೊಳಿಸುತ್ತದೆ’ ಎಂದು ಮೋದಿ ತಿಳಿಸಿದ್ದಾರೆ.
‘ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗಳಿಗೆ ಮತ ಹಾಕಿದ ಕೇರಳದಾದ್ಯಂತದ ಜನರಿಗೆ ನನ್ನ ಕೃತಜ್ಞತೆಗಳು. ಕೇರಳವು ಯುಡಿಎಫ್ ಮತ್ತು ಎಲ್‌ಡಿಎಫ್‌ನಿಂದ ಬೇಸತ್ತಿದೆ. ಉತ್ತಮ ಆಡಳಿತವನ್ನು ನೀಡುವ ಮತ್ತು ಎಲ್ಲರಿಗೂ ಅವಕಾಶಗಳೊಂದಿಗೆ ವಿಕಾಸಿತ ಕೇರಳವನ್ನು ನಿರ್ಮಿಸುವ ಏಕೈಕ ಆಯ್ಕೆಯಾಗಿ ಮತದಾರರು ಎನ್‌ಡಿಎಗೆ ಬೆಂಬಲ ಸೂಚಿಸಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.
‘ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಅದ್ಭುತ ಫಲಿತಾಂಶವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕೆಲಸ ಮಾಡಿದ ಎಲ್ಲಾ ಕ್ರಿಯಾಶೀಲ ಬಿಜೆಪಿ ಕಾರ್ಯಕರ್ತರಿಗೆ ನನ್ನ ಕೃತಜ್ಞತೆಗಳು. ಇಂದಿನ ಫಲಿತಾಂಶವನ್ನು ನಿಜವಾಗಿಸಲು ತಳಮಟ್ಟದಲ್ಲಿ ಕೆಲಸ ಮಾಡಿದ ಕೇರಳದ ಕಾರ್ಯಕರ್ತರ ತಲೆಮಾರುಗಳ ಕೆಲಸ ಮತ್ತು ಹೋರಾಟಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ನಮ್ಮ ಕಾರ್ಯಕರ್ತರೇ ನಮ್ಮ ಶಕ್ತಿ. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ’ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್ ಹಿನ್ನಡೆ ಅನುಭವಿಸಿದ್ದರೂ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಬಹುಮತದತ್ತ ದಾಪುಗಾಲಿಟ್ಟಿದೆ.
2026ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯು ಯುಡಿಎಫ್‌ಗೆ ಸಿಕ್ಕ ಉತ್ತಮ ಅವಕಾಶ ಎಂದು ಪರಿಗಣಿಸಲಾಗಿದೆ. ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಮತದಾರರನ್ನು ಸೆಳೆಯಲು ಎಲ್‌ಡಿಎಫ್ ಮಾಡಿದ ಕೊನೆಯ ಪ್ರಯತ್ನವು ವಿಫಲವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯ ಅಂತಿಮ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.