ಹಿಜಾಬ್
ಐಸ್ಟಾಕ್ ಚಿತ್ರ
ಕೊಚ್ಚಿ: ಹಿಜಾಬ್ ಧರಿಸುವ ಮೂಲಕ ಶಾಲಾ ಸಮವಸ್ತ್ರ ನಿಯಮ ಪಾಲಿಸದ ಕುರಿತು ಪಾಲಕರ ಸಭೆಯಲ್ಲಿ ಪ್ರಾಂಶುಪಾಲರು ಪ್ರಸ್ತಾಪಿಸಿದ ವಿಷಯ ವಿಕೋಪಕ್ಕೆ ಹೋದ ಪರಿಣಾಮ, ಶಾಲೆಗೆ ಎರಡು ದಿನ ರಜೆ ನೀಡಿದ ಘಟನೆ ಕೇರಳದ ಪಲ್ಲುರಿತಿಯಲ್ಲಿ ನಡೆದಿದೆ.
ಕ್ರೈಸ್ತ ಸಮುದಾಯಕ್ಕೆ ಸೇರಿದ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಮವಸ್ತ್ರ ನಿಯಮ ಪಾಲಿಸುತ್ತಿಲ್ಲ ಎಂದು ಶಿಕ್ಷಕರು ಪಾಲಕರಿಗೆ ತಿಳಿಸಿದ್ದರು. ಆದರೆ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಂಬಲದೊಂದಿಗೆ ಕೆಲ ಪಾಲಕರು ಶಾಲೆಯ ಶಿಕ್ಷಕಿಯರಾದ ಕ್ರೈಸ್ತ ಸನ್ಯಾಸಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಪ್ರಾಂಶುಪಾಲರಾದ ಸಿಸ್ಟರ್ ಹೆಲೀನಾ ಅಲ್ಬೇ, ಶಾಲೆಗೆ ಅ. 13 ಹಾಗೂ 14ರಂದು ರಜೆ ಘೋಷಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಸಂತ ರೀಟಾ ಪಬ್ಲಿಕ್ ಶಾಲೆಯಲ್ಲಿ ನಡೆದ ಈ ಘಟನೆಯ ಕೇರಳದಲ್ಲಿ ರಾಜಕೀಯ ಕೆಸೆರೆಚಾಟಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ಗದ್ದಲ ನಡೆಸಿದ ಘಟನೆಯನ್ನು ಬಿಜೆಪಿ ಖಂಡಿಸಿತು. ಶಾಲೆಯಲ್ಲಿ ನಡೆದ ಕ್ಷುಲ್ಲಕ ವಿಷಯಕ್ಕೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕೋಮುಬಣ್ಣ ಬಳಿಯುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಎರ್ನಾಕುಲಂ ಸಂಸದ ಹಿಬಿ ಎಡೆನ್ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಶಾಲೆಯ ವಸ್ತ್ರಸಂಹಿತೆ ನಿಯಮವನ್ನು ಪಾಲಿಸುವುದಾಗಿ ಹಿಜಬ್ ಧರಿಸಿ ಬಂದಿದ್ದ ಬಾಲಕಿಯ ತಂದೆಯು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬಾಲಕಿಯ ತಂದೆ ಅನಾಸ್ ಅವರು ಪ್ರತಿಕ್ರಿಯಿಸಿ, ತಮ್ಮ ಮಗಳು ಇದೇ ಶಾಲೆಯಲ್ಲಿ ಓದು ಮುಂದುವರಿಸಬೇಕು. ಹೀಗಾಗಿ ಶಾಲೆಯ ನಿಯಮದಂತೆಯೇ ಮಗಳು ತರಗತಿಗೆ ಬರುವುದಾಗಿ ತಿಳಿಸಿದ್ದಾರೆ.
ಅನಾಸ್ ನಿರ್ಧಾರ ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಸಂಸದ ಎಡೆನ್, ‘ಕೋಮು ಸೌಹಾರ್ದತೆಗೆ ಸಂಬಂಧಿಸಿದಂತೆ ಸಮಾಜಕ್ಕೆ ಇದೊಂದು ಗಟ್ಟಿ ಸಂದೇಶವಾಗಿದೆ. ಸಮಾಜವನ್ನು ಒಡೆದು ಆಳುವ ತಂತ್ರವನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡೆಸುತ್ತಿವೆ’ ಎಂದು ಆರೋಪಿಸಿದ್ದಾರೆ.
ಎಡೆನ್ ಸಮ್ಮುಖದಲ್ಲಿ ಪಾಲಕರ ಹಾಗೂ ಶಾಲೆಯ ಆಡಳಿತ ಮಂಡಳಿಯ ಸಭೆ ನಡೆಯಿತು. ಆದರೆ ಪ್ರಾಂಶುಪಾಲರಾದ ಸಿಸ್ಟರ್ ಹೆಲೀನಾ ಅಲ್ಬೇ ಅದರಲ್ಲಿ ಪಾಲ್ಗೊಳ್ಳಲಿಲ್ಲ. ಈ ಬೆಳವಣಿಗೆ ಕುರಿತು ಶಾಲೆಯ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶಾಲಾ ಶಿಕ್ಷಣ ಸಚಿವ ವಿ. ಶವನ್‌ಕುಟ್ಟಿ ಪ್ರತಿಕ್ರಿಯಿಸಿ, ‘ಶಾಲಾ ಸಮವಸ್ತ್ರ ಬದಲಿಸುವ ಯಾವುದೇ ಕ್ರಮಕ್ಕೆ ಅವಕಾಶವಿಲ್ಲ. ಸಮವಸ್ತ್ರ ನಿಯಮ ಎಲ್ಲಾ ವಿದ್ಯಾರ್ಥಿಗಳೂ ಒಂದೇ’ ಎಂದಿದ್ದಾರೆ.
ಬಿಜೆಪಿ ಮುಖಂಡ ಶೋನ್ ಜಾರ್ಜ್ ಅವರು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ್ದಾರೆ. ‘ಚರ್ಚ್ ಮತ್ತು ಸನ್ಯಾಸಿನಿಯರಿಗೆ ನಮ್ಮ ಬೆಂಬಲವಿದೆ. ಶಾಲೆಯ ಸುಗಮ ಕಾರ್ಯನಿರ್ವಹಣೆಗೆ ಕಾನೂನು ರೀತಿಯಲ್ಲಿ ಮತ್ತು ರಾಜಕೀಯ ಬೆಂಬಲವನ್ನೂ ಬಿಜೆಪಿ ನೀಡಲಿದೆ’ ಎಂದು ಭರವಸೆ ನೀಡಿದ್ದಾರೆ.