
ಮುಸ್ಲಿಂ ಸಮುದಾಯದವರು ಪುಲ್ವಾಮದಲ್ಲಿ ಪ್ರತಿಭಟನ ಮೆರವಣಿಗೆ ನಡೆಸಿದರು
–ಪಿಟಿಐ ಚಿತ್ರ
ಶ್ರೀನಗರ: ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಸೋಮವಾರವೂ ಪ್ರತಿಭಟನೆಗಳು ನಡೆದವು.
ಕಣಿವೆ ಪ್ರದೇಶದಲ್ಲಿ ಎರಡನೇ ದಿನವೂ ಪ್ರತಿಭಟನೆಗಳು ನಡೆದ ಕಾರಣ ಪೊಲೀಸರು ತೀವ್ರ ನಿಗಾ ವಹಿಸಿದ್ದರು ಮತ್ತು ಮೊಬೈಲ್ ಇಂಟರ್‌ನೆಟ್ ಸೇವೆಯ ವೇಗವನ್ನು ಕಡಿಮೆಗೊಳಿಸಿದ್ದರು.
ಶಿಯಾ ಸಮುದಾಯದವರು ಬಹುಸಂಖ್ಯೆಯಲ್ಲಿರುವ ಬೆಮಿನ, ಗುಂಡ್ ಹಸ್ಸಿಭತ್ ಮತ್ತು ಜಹಾಂಗೀರ್ ಚೌಕ್ ಮತ್ತು ಪುಲ್ವಾಮದಲ್ಲಿ ಪ್ರತಿಭಟನೆ ತೀವ್ರವಾಗಿತ್ತು. ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೆಲ ಪ್ರದೇಶಗಳಲ್ಲಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಬಲ ಪ್ರಯೋಗ ಮಾಡಿದರು. ಜನಸಂಚಾರದ ಮೇಲೆಯೂ ನಿರ್ಬಂದ ಹೇರಲಾಗಿತ್ತು. ಲಾಲ್‌ಚೌಕ್ ನಗರ ಮತ್ತು ಜಿಲ್ಲೆಗಳ ಹಲವು ರಸ್ತೆಗಳಲ್ಲಿ ತಂತಿ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.
ಮುತಾಹಿದಾ ಮಜ್ಲಿಸ್ –ಇ–ಉಲಾಮ(ಎಂಎಂಯು) ಅಧ್ಯಕ್ಷ ಮಿರ್‌ವಾಝ್ ಉಮರ್ ಫಾರೂಕ್ ಅವರು ಪ್ರತಿಭಟನೆಗೆ ಕರೆ ನೀಡಿದ್ದರು. ಪಿಡಿಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಈ ಪ್ರತಿಭಟನೆಗೆ ಬೆಂಬಲ ನೀಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.