ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯ ಸಾವಿನ ಪ್ರಕರಣವನ್ನು ಸಮರ್ಪಕ ತನಿಖೆ ನಡೆಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಪಿಟಿಐ ಚಿತ್ರ
ಕಾಠ್ಮಂಡು: ಒಡಿಶಾದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ನೇಪಾಳಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ತೊರೆಯುವಂತೆ ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ. ಇದರಿಂದಾಗಿ ನೇಪಾಳದ 159 ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ.
ರಕ್ಸೌಲ್ ಗಡಿ ಮೂಲಕ 159 ನೇಪಾಳಿ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ ಎಂದು ಪಾರ್ಸಾದ ಸಹಾಯಕ ಮುಖ್ಯ ಜಿಲ್ಲಾಧಿಕಾರಿ ಸುಮನ್ ಕುಮಾರ್ ಕರ್ಕಿ ತಿಳಿಸಿದ್ದಾರೆ.
ಸ್ವದೇಶಕ್ಕೆ ಮರಳಿದ ವಿದ್ಯಾರ್ಥಿಗಳಲ್ಲಿ 3ನೇ ವರ್ಷದ ಬಿ–ಟೆಕ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಕೃತಿ ಲಮ್ಸಾಲ್ ಪ್ರತಿಕ್ರಿಯಿಸಿ, ‘ಒಡಿಶಾದ ಕೆಐಐಟಿಯಲ್ಲಿ ನೇಪಾಳ ಮೂಲದ ಸುಮಾರು ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಫೆ. 16ರಂದು ವಿದ್ಯಾರ್ಥಿನಿಯೊಬ್ಬರು ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದಿದ್ದಾರೆ.
‘ಕೆಐಐಟಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ನಂತರ ನೇಪಾಳದ ವಿದ್ಯಾರ್ಥಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ನಮ್ಮನ್ನು ಅವಾಚ್ಯವಾಗಿ ನಿಂದಿಸಲಾಯಿತು. ಶಿಕ್ಷಕರ ಸಮ್ಮುಖದಲ್ಲೇ ಭದ್ರತಾ ಸಿಬ್ಬಂದಿ ನಮ್ಮನ್ನು ಥಳಿಸಿದರು. ತಕ್ಷಣವೇ ವಿದ್ಯಾರ್ಥಿ ನಿಲಯವನ್ನು ಖಾಲಿ ಮಾಡುವಂತೆ ಸೂಚಿಸಲಾಯಿತು’ ಎಂದು ತಮ್ಮ ಅಳಲು ತೋಡಿಕೊಂಡರು.
‘ವಿಶ್ವವಿದ್ಯಾಲಯದ ಆಡಳಿತವು ನಮಗೆ ಅಭಯ ನೀಡದ ಹೊರತು, ಕಾಲೇಜಿನಲ್ಲಿ ನಮಗೆ ಸುರಕ್ಷತೆಯ ಖಾತ್ರಿ ಇಲ್ಲದಾಗಿದೆ. ವಿದ್ಯಾರ್ಥಿನಿಯ ಸಾವಿನ ಕುರಿತು ಸಮರ್ಪಕ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.
ನೇಪಾಳ ವಿದೇಶಾಂಗ ಸಚಿವೆ ಆರ್ಜೂ ರಾಣಾ ದೇವಾ ಪ್ರತಿಕ್ರಿಯಿಸಿ, ‘ರಾಜತಾಂತ್ರಿಕ ಮಾರ್ಗದ ಮೂಲಕ ವಿದ್ಯಾರ್ಥಿನಿಯ ಸಾವಿನ ಸುತ್ತ ಎದ್ದಿದ್ದ ವಿವಾದವನ್ನು ಬಗೆಹರಿಸಲಾಗಿದೆ. ಒಡಿಶಾದ ಉನ್ನತ ಶಿಕ್ಷಣ ಸಚಿವ ಸೂರ್ಯವಂಶಿ ಸೂರಜ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ವಿದ್ಯಾರ್ಥಿನಿಯ ಸಾವಿನ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವ ಕುರಿತು ಅವರು ಭರವಸೆ ನೀಡಿದ್ದಾರೆ. ಜತೆಗೆ ನೇಪಾಳದ ವಿದ್ಯಾರ್ಥಿಗಳು ಕಾಲೇಜಿಗೆ ಮರಳಿದರೆ ಸುರಕ್ಷಿತ ವಾತಾವರಣ ಸೃಷ್ಟಿಸುವುದಾಗಿಯೂ ಹೇಳಿದ್ದಾರೆ’ ಎಂದಿದ್ದಾರೆ.
‘ಮಾತುಕತೆ ನಂತರ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಗೆ ಒಡಿಶಾ ಸರ್ಕಾರ ಆದೇಶಿಸಿದೆ. ಇದಾದ ಬೆನ್ನಲ್ಲೇ ಕಾಲೇಜು ಕ್ಷಮೆ ಕೋರಿದ್ದು, ನೇಪಾಳದ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಂಡಿದೆ’ ಎಂದು ಆರ್ಜೂ ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾವಿಗೆ ಕಂಬನಿ ಮಿಡಿದು ಹಾಗೂ ನ್ಯಾಯಯುತ ತನಿಖೆಗೆ ಒತ್ತಾಯಿಸಿ ನೇಪಾಳದ ವಿದ್ಯಾರ್ಥಿಗಳು ಮೊಂಬತ್ತಿ ಮೆರವಣಿಗೆ ನಡೆಸಿದ್ದಾರೆ. ಕೆಲವೆಡೆ ಪ್ರತಿಭಟನಾ ರ‍್ಯಾಲಿಯೂ ನಡೆದ ಕುರಿತು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.