ಮೈಸೂರಿನ ಇಸ್ಕಾನ್ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದೇವರಿಗೆ ಅಲಂಕಾರ ಮಾಡಲಾಗಿದೆ.
-ಪ್ರಜಾವಾಣಿ ಚಿತ್ರ.
ನವದೆಹಲಿ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ.
‘ಎಲ್ಲಾ ದೇಶವಾಸಿಗಳಿಗೆ ಜನ್ಮಾಷ್ಟಮಿಯ ಹೃತ್ಪೂರ್ವಕ ಶುಭಾಶಯಗಳು. ಸಂತೋಷ ಮತ್ತು ಉತ್ಸಾಹದ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿ ಮತ್ತು ನವ ಉತ್ಸಾಹವನ್ನು ತುಂಬಲಿ. ಜೈ ಶ್ರೀ ಕೃಷ್ಣ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪ್ರತಿಯೊಬ್ಬ ಭಾರತೀಯರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಈ ಹಬ್ಬವು ಶ್ರೀಕೃಷ್ಣನ ಗೀತೆಯ ಬೋಧನೆಗಳನ್ನು ಅರ್ಥಮಾಡಿಕೊಳ್ಳಲು, ಅವುಗಳನ್ನು ಕಾರ್ಯಗತಗೊಳಿಸಲು ಮತ್ತು ನಿಸ್ವಾರ್ಥ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ. ಕೃಷ್ಣನು ಇಡೀ ಮನುಕುಲಕ್ಕೆ ಧರ್ಮದ ಮಾರ್ಗವನ್ನು ಅನುಸರಿಸುವ ಸಂದೇಶ ನೀಡಿದ್ದಾನೆ. ಈ ಶುಭ ಸಂದರ್ಭದಲ್ಲಿ, ನಮ್ಮ ಸಮಾಜ ಮತ್ತು ರಾಷ್ಟ್ರವನ್ನು ಸಮೃದ್ಧಗೊಳಿಸುವ ಕೆಲಸ ಮಾಡೋಣ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನಾಡಿನ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಅನ್ಯಾಯ, ಅಸತ್ಯ, ಅಧರ್ಮಗಳ ವಿರುದ್ಧ ಕೃಷ್ಣನು ತೋರಿದ ಧರ್ಮದ ಹಾದಿಯು ಸರ್ವರಿಗೂ ಮಾದರಿಯಾಗಲಿ, ಸಮಾಜದಲ್ಲಿ ಸದಾಕಾಲ ಸುಖ, ಶಾಂತಿ ನೆಲೆಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಭಗವಾನ್ ಶ್ರೀಕೃಷ್ಣನು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.