ADVERTISEMENT

ಕರ್ನೂಲ್‌ ಬಸ್‌ ದುರಂತ | ಮದ್ಯ ಸೇವಿಸಿಯೇ ಬೈಕ್‌ ಚಲಾಯಿಸಿದ್ದ ಸವಾರ: ‌‌‌FSL ವರದಿ

ಡೆಕ್ಕನ್ ಹೆರಾಲ್ಡ್
Published 26 ಅಕ್ಟೋಬರ್ 2025, 10:40 IST
Last Updated 26 ಅಕ್ಟೋಬರ್ 2025, 10:40 IST
   

ಹೈದರಾಬಾದ್‌: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್‌ ಎ.ಸಿ. ಬಸ್‌ಗೆ ಬೆಂಕಿ ಹತ್ತಿಕೊಂಡು 19 ಮಂದಿ ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಬೈಕ್‌ ಸವಾರ ಮದ್ಯಪಾನ ಮಾಡಿ, ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂಬುದು ದೃಢಪಟ್ಟಿದೆ.

‘ಬೈಕ್‌ ಸವಾರ ಬಿ.ಶಿವಶಂಕರ್‌ (22) ಮದ್ಯಪಾನ ಮಾಡಿ ಬೈಕ್‌ ಚಲಾಯಿಸುತ್ತಿದ್ದ. ಹೀಗಾಗಿಯೇ, ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿ ಹೊಡೆದು ಬಸ್‌ ಅಪಘಾತಕ್ಕೂ ಮೊದಲೇ ಮೃತಪಟ್ಟಿದ್ದ. ಇದಾದ ಬಳಿಕವೇ ಅದೇ ರಸ್ತೆಯಲ್ಲಿ ಬಂದ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಇದರಿಂದ, ಬಸ್‌ಗೂ ಬೆಂಕಿ ತಗುಲಿತ್ತು. ಅಪಘಾತಕ್ಕೂ ಮುನ್ನ ಬೈಕ್‌ನ ಹಿಂಬದಿ ಸವಾರ ಯೆರ್ರಿಸ್ವಾಮಿ ಕೂಡ ಮದ್ಯಪಾನ ಸೇವಿಸಿದ್ದನ್ನು ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಕರ್ನೂಲ್‌ ಪೊಲೀಸರು ತಿಳಿಸಿದ್ದಾರೆ.

‘ಬೈಕ್‌ ಸವಾರನ ಒಳಾಂಗಗಳ ಮಾದರಿಯಲ್ಲಿ ಮದ್ಯಸೇವಿಸಿರುವುದನ್ನು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪತ್ತೆಯಾಗಿದೆ’ ಎಂದು ಕರ್ನೂಲ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಾಂತ್‌ ಪಾಟೀಲ್ ತಿಳಿಸಿದ್ದಾರೆ.

ADVERTISEMENT

‘ಮದ್ಯದ ಅಮಲಿನಲ್ಲಿಯೇ ಸವಾರ ಬೈಕ್‌ ಚಲಾಯಿಸಿದ್ದಾನೆ. ಎಫ್‌ಎಸ್‌ಎಲ್‌ ವರದಿಯಲ್ಲೂ ಆತ ಮದ್ಯ ಸೇವಿಸಿದ್ದು ಕಂಡುಬಂದಿದೆ’ ಎಂದು ಹೇಳಿದ್ದಾರೆ. 

ಸ್ನೇಹಿತ ಯೆರ್ರಿಸ್ವಾಮಿ ನೀಡಿದ ದೂರಿನ ಅನ್ವಯ, ಶಿವಶಂಕರ್‌ ವಿರುದ್ಧ ಉಲಿಂಡಕೊಂಡ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ‍್ರಕರಣ ದಾಖಲಾಗಿದೆ. ಆರೋಪಿಯು ಅಜಾಗರೂಕತೆಯಿಂದ ವಾಹನ ಚಲಾಯಿಸಿ, ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 281, 125(ಎ) ಹಾಗೂ 106(1)  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಯಾಣಿಕ ರಮೇಶ್‌ ನೀಡಿದ ದೂರಿನ ಅನ್ವಯ ಬಸ್‌ ಚಾಲಕ ಮಿರಿಯಾಲ ಲಕ್ಷ್ಮಯ್ಯ ಆರೋಪಿ ನಂ.1, ಬಸ್‌ ಮಾಲೀಕ ವೆಮುರಿ ವಿನೋದ್‌ ಕುಮಾರ್‌ ಅವರನ್ನು ಆರೋಪಿ ನಂ.12 ಹೆಸರಿಸಲಾಗಿದೆ.

ಖಾಸಗಿ ಬಸ್‌ಗಳ ಮೇಲೆ ಕಠಿಣ ಕ್ರಮ; 14 ಪ್ರಕರಣಗಳು ದಾಖಲು

ಹೈದರಬಾದ್‌: ಬಸ್‌ ದುರಂತದಿಂದ ಎಚ್ಚೆತ್ತುಕೊಂಡಿರುವ ತೆಲಂಗಾಣ ಸರ್ಕಾರದ ಸಾರಿಗೆ ಇಲಾಖೆಯ ಅಧಿಕಾರಿಗಳು ಸುರಕ್ಷತೆ ಹಾಗೂ ಫಿಟ್ನೆಸ್‌ ನಿಯಾಮವಳಿಗಳನ್ನು ಉಲ್ಲಂಘಿಸಿದ ಖಾಸಗಿ ಬಸ್‌ಗಳ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ. ‘ಸುರಕ್ಷತಾ ಕ್ರಮಗಳ ಕೊರತೆ ಹೊಂದಿರುವ ಬಸ್‌ಗಳ ಮೇಲೆ 14 ಪ್ರಕರಣಗಳನ್ನು ದಾಖಲಿಸಿದ್ದು ₹46 ಸಾವಿರ ದಂಡ ಸಂಗ್ರಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈದರಬಾದ್‌ನಿಂದ ನಿತ್ಯವೂ 500ಕ್ಕೂ ಅಧಿಕ ಅಂತರರಾಜ್ಯ ಬಸ್‌ಗಳು ಸಂಚರಿಸುತ್ತವೆ.

‘ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು’

ಹೈದರಾಬಾದ್‌: ಕರ್ನೂಲ್ ಬಳಿ ಬಸ್‌ ದುರಂತ ನಡೆಯಲು ಕಾರಣ ಎನ್ನಲಾದ ಮದ್ಯಪಾನ ಮಾಡಿದ್ದ ಬೈಕ್ ಸವಾರನ ವಿಡಿಯೊ ಹಂಚಿಕೊಂಡು ಟ್ವೀಟ್ ಮಾಡಿರುವ ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರಿದ್ದಂತೆ ಎಂದು ತೀವ್ರ ಕಿಡಿಕಾರಿದ್ದಾರೆ. ‘ಕರ್ನೂಲ್ ಬಸ್ ದುರಂತ ಒಂದು ಅಪಘಾತವಲ್ಲ. ಇದು ಬೈಕ್ ಚಾಲಕನ ಬೇಜವಾಬ್ದಾರಿತನದ ವರ್ತನೆ. ಅವನಿಂದಲೇ ಅಮಾಯಕರು ಪ್ರಾಣ ಕಳೆದುಕೊಂಡಿರುವುದು ತಿಳಿದು ಬಂದಿದೆ. ಇಂತವರನ್ನು ಯಾರೂ ಕ್ಷಮಿಸುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾನು ಪ್ರಜ್ಞಾಪೂರ್ವಕವಾಗಿಯೇ ಹೇಳುತ್ತಿದ್ದೇನೆ. ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರಿದ್ದಂತೆ. ಅವರು ಅಮಾಯಕರ ಜೀವನ ಭವಿಷ್ಯ ಅವರ ಕುಟುಂಬವನ್ನೂ ಹಾಳು ಮಾಡುತ್ತಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.