ADVERTISEMENT

ಲಡಾಖ್ ಹಿಂಸಾಚಾರಕ್ಕೆ ವಾಂಗ್‌ಚುಕ್ ಪ್ರಚೋದನಾಕಾರಿ ಹೇಳಿಕೆ ಕಾರಣ: ಕೇಂದ್ರ ಸರ್ಕಾರ

ಶೆಮಿನ್ ಜಾಯ್‌
Published 25 ಸೆಪ್ಟೆಂಬರ್ 2025, 4:23 IST
Last Updated 25 ಸೆಪ್ಟೆಂಬರ್ 2025, 4:23 IST
<div class="paragraphs"><p>ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಹಾಗೂ ಲಡಾಖ್‌ನಲ್ಲಿ ನಡೆದ ಪ್ರತಿಭಟನೆಯ ದೃಶ್ಯ</p></div>

ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಹಾಗೂ ಲಡಾಖ್‌ನಲ್ಲಿ ನಡೆದ ಪ್ರತಿಭಟನೆಯ ದೃಶ್ಯ

   

ಕೃಪೆ: ಪಿಟಿಐ

ನವದೆಹಲಿ: ಲಡಾಖ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ವಿರುದ್ಧ ಬೊಟ್ಟು ಮಾಡಿರುವ ಕೇಂದ್ರ ಸರ್ಕಾರ, ಅವರು (ಸೋನಮ್‌ ವಾಂಗ್‌ಚುಕ್‌) ನೇಪಾಳದಲ್ಲಿ ಇತ್ತೀಚೆಗೆ ನಡೆದ ಜೆನ್‌–ಝೀ ಪ್ರತಿಭಟನೆಯ ಕುರಿತು ಪ್ರಚೋದನಾಕಾರಿ ಉಲ್ಲೇಖಗಳನ್ನು ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸಿದರು ಎಂದು ಬುಧವಾರ ಹೇಳಿದೆ.

ADVERTISEMENT

ಕೇಂದ್ರ ಗೃಹ ಸಚಿವಾಲಯ ತಡರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಲಡಾಖ್‌ಗೆ ರಾಜ್ಯ ಸ್ಥಾನಮಾನ ಹಾಗೂ ಸಾಂವಿಧಾನಿಕ ರಕ್ಷಣೆಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ವಾಂಗ್‌ಚುಕ್‌ ನೀಡಿದ ಹೇಳಿಕೆಗಳು ಜನಸಮೂಹವನ್ನು ಹಿಂಸಾಚಾರಕ್ಕೆ ಪ್ರಚೋದಿಸಿದವು ಎಂದು ಉಲ್ಲೇಖಿಸಲಾಗಿದೆ.

ಬುಧವಾರ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ನಾಲ್ವರು ಮೃತಪಟ್ಟು, 80ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಈ ಸರ್ಕಾರ ಹೇಳಿಕೆ ನೀಡಿದೆ.

'ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್‌ಚುಕ್‌ ಅವರು ಇಟ್ಟಿರುವ ಬೇಡಿಕೆಗಳು ಉನ್ನತ ಅಧಿಕಾರ ಸಮಿತಿ (ಎಚ್‌ಪಿಸಿ) ಸಭೆಯ ಚರ್ಚೆಯ ಪ್ರಮುಖ ಅಂಶಗಳಾಗಿವೆ. ಸತ್ಯಾಗ್ರಹವನ್ನು ಕೈಬಿಡುವಂತೆ ಹಲವು ನಾಯಕರು ಒತ್ತಾಯಿಸಿದ್ದರೂ, ಅವರು ಹೋರಾಟವನ್ನು ಮುಂದವರಿಸಿದ್ದರು. ಅಷ್ಟಲ್ಲದೆ ಅರಬ್‌ ಸ್ಪ್ರಿಂಗ್‌ ಶೈಲಿಯ ಹಾಗೂ ನೇಪಾಳದಲ್ಲಿ ನಡೆದ ಜೆನ್‌–ಝೀ ಮಾದರಿಯ ಪ್ರತಿಭಟನೆಗಳನ್ನು ಉಲ್ಲೇಖಿಸುವ ಮೂಲಕ ಜನರನ್ನು ದಾರಿ ತಪ್ಪಿಸಿದರು' ಎಂದು ಪ್ರತಿಪಾದಿಸಿದೆ. 

ಸಾಂವಿಧಾನಿಕವಾಗಿ ರಕ್ಷಣೆ ಒದಗಿಸುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದಿರುವ ಸಚಿವಾಲಯ, ಹಳೆಯ ಮತ್ತು ಪ್ರಚೋದನಕಾರಿ ವಿಡಿಯೊಗಳನ್ನು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಮನವಿ ಮಾಡಿದೆ.

ಎಚ್‌ಪಿಸಿಯ ಮುಂದಿನ ಸಭೆಯನ್ನು ಅಕ್ಟೋಬರ್‌ 6ರಂದು ನಡೆಸಲು ನಿರ್ಧರಿಸಲಾಗಿದೆ. ಹಾಗೆಯೇ, ಸೆಪ್ಟೆಂಬರ್‌ 25 ಮತ್ತು 26ರಂದು ಲಡಾಖ್‌ ನಾಯಕರೊಂದಿಗೆ ಮಾತುಕತೆ ನಡೆಸಲು ಯೋಜಿಸಲಾಗಿದೆ ಎಂದೂ ಮಾಹಿತಿ ನೀಡಿದೆ.

ವಾಂಗ್‌ಚುಕ್‌ ಅವರ ಪ್ರಚೋದನಾಕಾರಿ ಭಾಷಣಗಳ ಬಳಿಕ, ಬೆಳಿಗ್ಗೆ 11.30ರ ಸುಮಾರಿಗೆ ಪ್ರತಿಭಟನಾ ಸ್ಥಳದಿಂದ ತೆರಳಿದ ಒಂದು ಗುಂಪು ರಾಜಕೀಯ ಪಕ್ಷವೊಂದರ ಕಚೇರಿ ಹಾಗೂ ಲೇಹ್‌ ಸಿಇಸಿ ಕಚೇರಿ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದೆ.

'ಅವರು (ಗುಂಪು) ಕಚೇರಿಗಳಿಗೆ ಬೆಂಕಿ ಹಚ್ಚಿದರು. ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡಿದರು. ಪೊಲೀಸ್‌ ವಾಹನಗಳಿಗೂ ಬೆಂಕಿ ಹಚ್ಚಿದರು. ದಾಳಿ ವೇಳೆ ಕನಿಷ್ಠ 30 ಪೊಲೀಸರು/ಸಿಆರ್‌ಪಿಎಫ್‌ ಸಿಬ್ಬಂದಿ ಗಾಯಗೊಂಡರು. ಆದಾಗ್ಯೂ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದನ್ನು, ಪೊಲೀಸರ ಮೇಲಿನ ದಾಳಿಯನ್ನು ಆ ಗುಂಪು ಮುಂದುವರಿಸಿತು. ಹೀಗಾಗಿ, ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು. ಈ ವೇಳೆ, ದುರದೃಷ್ಟವಶಾತ್‌ ಕೆಲವು ಸಾವು–ನೋವು ವರದಿಯಾಗಿವೆ' ಎಂದು ವಿವರಿಸಿದೆ.

'ದುರದೃಷ್ಟವಶಾತ್‌ ಬೆಳಿಗ್ಗೆ ನಡೆದ ಘಟನೆಗಳನ್ನು ಹೊರತುಪಡಿಸಿ, ಲಡಾಖ್‌ನಲ್ಲಿ ಪರಿಸ್ಥಿತಿಯನ್ನು ಸಂಜೆ 4ರ ಹೊತ್ತಿಗೆ ನಿಯಂತ್ರಣಕ್ಕೆ ತರಲಾಗಿದೆ. ವಾಂಗ್‌ಚುಕ್‌ ಅವರು ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಜನರನ್ನು ಉದ್ರೇಕಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇಷ್ಟಾದರೂ, ಅವರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗದೆ, ಉಪವಾಸ ಸತ್ಯಾಗ್ರಹವನ್ನು ಮೊಟಕುಗೊಳಿಸಿ ಆ್ಯಂಬುಲೆನ್ಸ್‌ನಲ್ಲಿ ತಮ್ಮ ಗ್ರಾಮಕ್ಕೆ ತೆರಳಿದರು' ಎಂದು ಆರೋಪಿಸಲಾಗಿದೆ.

ಲಡಾಖ್‌ ಅನ್ನು ಸಂವಿಧಾನದ 6ನೇ ಅನುಚ್ಛೇದದ ವ್ಯಾಪ್ತಿಗೆ ಸೇರಿಸಬೇಕು. ಜೊತೆಗೆ, ರಾಜ್ಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ವಾಂಗ್‌ಚುಕ್‌ ಅವರು ಸೆಪ್ಟೆಂಬರ್‌ 10ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು ಎಂದಿರುವ ಗೃಹ ಸಚಿವಾಲಯ, ಕೇಂದ್ರ ಸರ್ಕಾರವು ಈ ವಿಚಾರವಾಗಿ ಲೇಹ್‌ನ ಅಪೆಕ್ಸ್‌ ಮಂಡಳಿ ಮತ್ತು ಕಾರ್ಗಿಲ್‌ ಡೆಮಾಕ್ರಟಿಕ್‌ ಅಲಯನ್ಸ್‌ ಜೊತೆ ಮಾತುಕತೆ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಚ್‌ಪಿಸಿ ಮೂಲಕ ಸರಣಿ ಸಭೆ ನಡೆಸಲಾಗಿದೆ ಎಂದು ವಿವರಿಸಿದೆ.

'ಈ ಪ್ರಕ್ರಿಯೆಯ ಮೂಲಕ ನಡೆದ ಸಂವಾದಗಳು ಲಡಾಖ್‌ ಬುಡಕಟ್ಟು ಸಮುದಾಯದವರಿಗೆ ಮೀಸಲಾತಿಯನ್ನು ಶೇ 45ರಿಂದ ಶೇ 84ಕ್ಕೆ ಹೆಚ್ಚಿಸುವ ಅದ್ಭುತ ಫಲಿತಾಂಶವನ್ನು ನೀಡಿವೆ. ಮಂಡಳಿಗಳಲ್ಲಿನ ನೇಮಕಾತಿಗಳಲ್ಲಿ ಮಹಿಳೆಯರಿಗೆ 3ನೇ 1ರಷ್ಟು ಮೀಸಲಾತಿ ಒದಗಿಸಿವೆ. ಭೋಟಿ ಮತ್ತು ಪುರ್ಗಿಯನ್ನು ಅಧಿಕೃತ ಭಾಷೆಯಗಳನ್ನಾಗಿ ಘೋಷಿಸಲಾಗಿದೆ. ನೇಮಕಾತಿ ಪ್ರಕ್ರಿಯೆಗಳನ್ನೂ ಆರಂಭಿಸಲಾಗಿದೆ. ಆದಾಗ್ಯೂ, ಎಚ್‌ಪಿಸಿ ಮೂಲಕ ಆಗಿರುವ ಪ್ರಗತಿಯಿಂದ ತೃಪ್ತರಾಗದ ಕೆಲವು ರಾಜಕೀಯ ಪ್ರೇರಿತ ವ್ಯಕ್ತಿಗಳು ಸಂವಾದ ಪ್ರಕ್ರಿಯೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ' ಎಂದು ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.