ADVERTISEMENT

ಲಖಿಂಪುರ ಘಟನೆಯ ಮರುಸೃಷ್ಟಿ: ಆಶಿಶ್‌ ಮಿಶ್ರಾರನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸರು

ಪಿಟಿಐ
Published 14 ಅಕ್ಟೋಬರ್ 2021, 16:45 IST
Last Updated 14 ಅಕ್ಟೋಬರ್ 2021, 16:45 IST
ಎಸ್‌ಐಟಿಯಿಂದ ಲಂಖಿಪುರ ಖೇರಿ ಘಟನೆಯ ಮರುಸೃಷ್ಟಿ
ಎಸ್‌ಐಟಿಯಿಂದ ಲಂಖಿಪುರ ಖೇರಿ ಘಟನೆಯ ಮರುಸೃಷ್ಟಿ   

ಲಖಿಂಪುರ ಖೇರಿ: ಲಿಖಿಂಪುರ ಖೇರಿ ಹಿಂಸಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಎಐ) ಗುರುವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಮತ್ತು ಇನ್ನಿತರ ಮೂವರನ್ನು ಉತ್ತರ ಪ್ರದೇಶದ ತಿಕೋನಿಯಾ ಗ್ರಾಮಕ್ಕೆ ಕರೆದೊಯ್ದು ಘಟನೆಯನ್ನು ಮರುಸೃಷ್ಟಿಸಿದೆ.

ಬಿಗಿ ಭದ್ರತೆಯ ನಡುವೆ ಮೂವರು ಆರೋಪಿಗಳನ್ನು ಲಖಿಂಪುರಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ತಿಕೊನಿಯಾ-ಬನ್ಬೀರ್‌ಪುರ ರಸ್ತೆಯಲ್ಲಿರುವ ಘಟನಾ ಸ್ಥಳಕ್ಕೆ ಕರೆದೊಯ್ಯಲಾಯಿತು. ಬಳಿಕ ಘಟನೆಯನ್ನು ಮರುಸೃಷ್ಟಿಸಲಾಗಿದೆ.

ಅಕ್ಟೋಬರ್ 3ರಂದು ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಹತ್ಯೆಯಾಗಿದ್ದರು. ಬಿಜೆಪಿ ಕಾರ್ಯಕರ್ತರು ಸಾಗುತ್ತಿದ್ದವಾಹನ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಇದರಲ್ಲಿ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಇದ್ದರು ಎನ್ನಲಾಗಿದೆ.

ಆಕ್ರೋಶಗೊಂಡ ರೈತರು ವಾಹನದಲ್ಲಿದ್ದ ಕೆಲವರನ್ನು ಹೊಡೆದರು ಎಂದು ಆರೋಪಿಸಲಾಗಿದೆ. ಮೃತರಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಚಾಲಕ ಸೇರಿದ್ದಾರೆ. ಘಟನೆಯಲ್ಲಿ ಓರ್ವ ಪತ್ರಕರ್ತ ಕೂಡ ಮೃತಪಟ್ಟಿದ್ದಾರೆ.

ಕೇಂದ್ರ ಸಚಿವ ಅಜಯ್ ಮಿಶ್ರಾ ಹಾಗೂ ಅವರ ಪುತ್ರ ಆಶಿಶ್ ಮಿಶ್ರಾ ವಾಹನದಲ್ಲಿ ಇದ್ದರು ಎಂದು ರೈತರು ಆರೋಪಿಸಿದ್ದರು. ಆದರೆ ಆರೋಪವನ್ನು ನಿರಾಕರಿಸಿರುವ ಆಶಿಶ್ ಹಾಗೂ ಅವರ ತಂದೆ, ಆ ಸಂದರ್ಭದಲ್ಲಿ ಬೇರೆ ಕಾರ್ಯಕ್ರಮದಲ್ಲಿದ್ದರು ಎಂಬುದನ್ನು ಸಾಬೀತುಪಡಿಸಲು ಸಾಕ್ಷ್ಯವನ್ನು ಒದಗಿಸುತ್ತೇವೆ ಎಂದಿದ್ದರು.

ಅಕ್ಟೋಬರ್ 9ರಂದು 12 ತಾಸಿನ ಸುದೀರ್ಘ ವಿಚಾರಣೆಯ ಬಳಿಕ ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಯಿತು. ಅಕ್ಟೋಬರ್ 12ರಿಂದ 15ರ ವರೆಗೆ ಪೊಲೀಸ್ ಕಸ್ಟಡಿಗೆ ರವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.