
ತೇಜ್ ಪ್ರತಾಪ್ ಯಾದವ್
ಪಟ್ನಾ: ಬಿಹಾರದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬ ಕಲಹ ಮುಂದುವರೆದಿದ್ದು ಅಪ್ಪ, ಅಮ್ಮ ಹಾಗೂ ಸಹೋದರಿ ವಿರುದ್ಧ ಯಾವುದೇ ರೀತಿಯ ದೌರ್ಜನ್ಯ ನಡೆದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದು ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮನವಿ ಮಾಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹುವಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ತೇಜ್ ಪ್ರತಾಪ್ ಯಾದವ್ ಸೋತಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಸೋತ ಬಳಿಕ ಲಾಲು ಪ್ರಸಾದ್ ಯಾದವ್ ಅವರ ಕುಟುಂಬದಲ್ಲಿ ಒಳ ಜಗಳ ತಾರಕಕ್ಕೇರಿದೆ. ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ ಅವರನ್ನು ತೇಜಸ್ವಿ ಯಾದವ್ ಮತ್ತು ಅವರ ಬಳಗ ಅವಮಾನ ಮಾಡಿದೆ ಎಂದು ಆರೋಪಿಸಿದ್ದರು. ಈ ವೇಳೆ ತೇಜ್ ಪ್ರತಾಪ್ ಯಾದವ್ ಅವರು ಸಹೋದರಿಯ ಬೆಂಬಲಕ್ಕೆ ನಿಂತಿದ್ದರು.
ಇದೀಗ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ನನ್ನ ತಂದೆ, ತಾಯಿ ಹಾಗೂ ಸಹೋದರಿ ವಿರುದ್ಧ ಮಾನಸಿಕ ಕಿರುಕುಳ ಹಾಗೂ ದೌರ್ಜನ್ಯ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ತನಿಖೆ ಮಾಡಿದರೆ ಸತ್ಯಾಂಶ ಹೊರಬರಲಿದೆ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ. ಈ ಕುರಿತು ತನಿಖೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಕೆಲ ಜೈಚಂದರು (ದ್ರೋಹಿಗಳು) ನನ್ನ ತಂದೆ, ತಾಯಿ, ಸಹೋದರಿಯನ್ನು ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಪಡಿಸಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರಲ್ಲಿ ಸ್ವಲ್ಪವಾದರೂ ಸತ್ಯವಿದ್ದರೆ, ಅದು ನನ್ನ ಕುಟುಂಬದ ಮೇಲೆ ಆಗಿರುವ ದಾಳಿ ಮಾತ್ರವಲ್ಲ, ಪಕ್ಷದ ಮೇಲಿನ ನೇರ ಹೊಡೆತ ಎಂದು ತಮ್ಮ ‘ಜನಶಕ್ತಿ ಜನತಾ ದಳ‘ ಪಕ್ಷದ ಎಕ್ಸ್ ಖಾತೆಯಿಂದ ಈ ಆರೋಪ ಮಾಡಿದ್ದಾರೆ.
ಟಿಕೆಟ್ ಹಂಚಿಕೆಯಲ್ಲಿನ ಅಕ್ರಮಗಳು, ಹಣಕ್ಕಾಗಿ ಟಿಕೆಟ್ ನೀಡುವುದು ಸೇರಿದಂತೆ ಹಲವಾರು ಅಕ್ರಮಗಳ ನಡೆದಿವೆ. ಇದನ್ನು ಜೈಚಂದರು ಮಾಡಿದ್ದು ಎಂದು ಆರೋಪಿಸಿದ್ದಾರೆ.
ನನ್ನ ತಂದೆಯವರು ಈಗಾಗಲೇ ಅನಾರೋಗ್ಯದಲ್ಲಿದ್ದು, ಇಂತಹ ಒತ್ತಡವನ್ನು ಸಹಿಸಿಕೊಳ್ಳಲಾಗುವುದಿಲ್ಲ. ನನ್ನ ತಾಯಿ, ಸಹೋದರಿ, ಅಥವಾ ನನ್ನ ತಂದೆ ವಿರುದ್ಧ ಯಾರಾದರೂ ದುರ್ವರ್ತನೆ ತೋರಿದರೆ, ಹಲ್ಲೆ ಮಾಡಿದರೆ, ಮಾನಸಿಕ ಕಿರುಕುಳ ನೀಡಿದರೆ, ಕೆಟ್ಟ ಪದಗಳಿಂದ ನಿಂದಿಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸದ್ಯದ ಪರಿಸ್ಥಿತಿಗೆ ಸಂಜಯ್ ಯಾದವ್, ರಮೀಜ್ ಖಾನ್ ಮತ್ತು ಪ್ರೀತಮ್ ಯಾದವ್ ಕಾರಣ ಎಂದು ಹೇಳಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ತೇಜ್ ಪ್ರತಾಪ್ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.