ADVERTISEMENT

ಭಾರತದ ಮೇಲೆ ಮತ್ತೆ ದಾಳಿ ಮಾಡ್ತೇವೆ: ಮುಂಬೈ ಕೃತ್ಯ ನೆನಪಿಸಿ ಎಚ್ಚರಿಸಿದ ಎಲ್‌ಇಟಿ

ಏಜೆನ್ಸೀಸ್
Published 25 ಫೆಬ್ರುವರಿ 2026, 8:01 IST
Last Updated 25 ಫೆಬ್ರುವರಿ 2026, 8:01 IST
   

ನವದೆಹಲಿ: ಭಾರತದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ 2008ರ ನವೆಂಬರ್ 26ರಂದು (26/11) ನಡೆದಿದ್ದ ದಾಳಿ ಮಾದರಿಯಲ್ಲೇ ಈ ವರ್ಷವೂ ದಾಳಿ ನಡೆಸುತ್ತೇವೆ ಎಂದು ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಬೆದರಿಕೆ ಹಾಕಿದ್ದಾನೆ.

ಭಾರತದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಿರಂತವಾಗಿ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ಕುರಿತು ಉದ್ವಿಗ್ನತೆ ಹೆಚ್ಚಿರುವುದರ ನಡುವೆಯೇ ಎಲ್‌ಇಟಿಯಿಂದ ಬೆದರಿಕೆ ಬಂದಿದೆ.

ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೆ ಪ್ರತಿಯಾಗಿ ನಾವು ವಾಯುಮಾರ್ಗದ ಮೂಲಕ ಯಶಸ್ವಿಯಾಗಿ ದಾಳಿ ನಡೆಸಿದ್ದೇವೆ. 2008ರ ಮುಂಬೈ ದಾಳಿಯ ಭಯಾನಕತೆ ಇನ್ನೂ ಮಾಸಿಲ್ಲ. ಈ ವರ್ಷವೂ ಸಮುದ್ರ ಮಾರ್ಗ ಬಳಸಿಕೊಂಡು 26/11 ಮಾದರಿಯಲ್ಲೇ ಭಾರತದಲ್ಲಿ ಮತ್ತೊಂದು ದಾಳಿ ಮಾಡುತ್ತೇವೆ’ ಎಂದು ಕಸೂರಿ ಹೇಳಿಕೊಂಡಿದ್ದಾನೆ.

ADVERTISEMENT

‘2025ರಲ್ಲಿ ಪಾಕಿಸ್ತಾನವು ವಾಯುಮಾರ್ಗದಲ್ಲಿ ಪ್ರಾಬಲ್ಯ ಸಾಧಿಸಿದೆ. 2026ರಲ್ಲಿ ಸಮುದ್ರ ಮಾರ್ಗದಲ್ಲೂ ಪ್ರಾಬಲ್ಯ ಸಾಧಿಸುತ್ತದೆ. ಭೂಮಿ, ಆಕಾಶ ಅಥವಾ ಸಮುದ್ರದಲ್ಲಿ ‘ಶತ್ರು’ವಿಗೆ (ಭಾರತಕ್ಕೆ) ಯಾವುದೇ ಸ್ಥಳ ಉಳಿಯುವುದಿಲ್ಲ. ‘ಅಲ್ಲಾ ಇಚ್ಛೆ’ಯಂತೆಯೇ ದಾಳಿ ನಡೆಸಲಾಗುತ್ತದೆ’ ಎಂದು ಕಸೂರಿ ಹೇಳಿದ್ದಾನೆ.

ಕಸೂರಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಭಾರತೀಯ ಗುಪ್ತಚರ ಸಂಸ್ಥೆಗಳು ಈ ವಿಡಿಯೊ ಪ್ರಚಾರ ಮತ್ತು ಅಪಾಯಕಾರಿ ಸಂಕೇತವೆಂದು ಪರಿಗಣಿಸಿವೆ. 2008ರ ಮುಂಬೈ ದಾಳಿಗೆ ಬಳಸಲಾದ ಸಮುದ್ರ ಮಾರ್ಗವನ್ನೇ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆಗಳು ಮತ್ತೆ ಬಳಸಲು ಪ್ರಯತ್ನಿಸುತ್ತಿವೆ ಎಂದು ಸಿಎನ್‌ಎನ್‌–ನ್ಯೂಸ್ 18 ವರದಿ ಮಾಡಿದೆ.

2008ರ ನವೆಂಬರ್‌ 26ರಂದು ಲಷ್ಕರ್–ಎ–ತಯಬಾ ಸಂಘಟನೆಯ ಹತ್ತು ಪಾಕಿಸ್ತಾನಿ ಉಗ್ರರು ಸಮುದ್ರದ ಮೂಲಕ ಕರಾಚಿಯಿಂದ ದೋಣಿಯಲ್ಲಿ ಬಂದು ಮುಂಬೈಗೆ ನುಸುಳಿದ್ದರು. ನಗರದ ಹೃದಯ ಭಾಗದಲ್ಲಿರುವ ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಲ್‌, ತಾಜ್‌ಮಹಲ್‌ ಹೋಟೆಲ್‌, ಟ್ರೈಡೆಂಟ್‌ ಹೋಟೆಲ್‌ ಮತ್ತು ಯಹೂದಿ ಕೇಂದ್ರಗಳ ಮೇಲೆ ಈ ಉಗ್ರರು ಗುಂಡಿನ ದಾಳಿ ನಡೆಸಿ ಅಮಾಯಕರನ್ನು ಬಲಿತೆಗೆದುಕೊಂಡಿದ್ದರು.

10 ದೇಶಗಳ 28 ವಿದೇಶಿಯರು ಸೇರಿದಂತೆ 166 ಮಂದಿ ಉಗ್ರರ ದಾಳಿಗೆ ಜೀವತೆತ್ತಿದ್ದರು. ಒಂಬತ್ತು ಉಗ್ರರನ್ನು ಕಮಾಂಡೊ ಪಡೆಗಳ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಅಜ್ಮಲ್‌ ಕಸಾಬ್‌ ಮಾತ್ರ ಜೀವಂತವಾಗಿ ಸೆರೆ ಸಿಕ್ಕಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.