
ರಾಹುಲ್ ಗಾಂಧಿ ಹಾಗೂ ಕಾಮನ್‌ವೆಲ್ತ್ ರಾಷ್ಟ್ರಗಳ ಸಂಸತ್ತಿನ ಸ್ಪೀಕರ್‌ಗಳು ಮತ್ತು ಅಧ್ಯಕ್ಷೀಯ ಅಧಿಕಾರಿಗಳ (ಸಿಎಸ್‌ಪಿಒಸಿ) 28ನೇ ಸಮ್ಮೇಳನದಲ್ಲಿ ಗಣ್ಯರು
ಕೃಪೆ: ಪಿಟಿಐ
ನವದೆಹಲಿ: ಕಾಮನ್‌ವೆಲ್ತ್ ರಾಷ್ಟ್ರಗಳ ಸಂಸತ್ತಿನ ಸ್ಪೀಕರ್‌ಗಳು ಮತ್ತು ಅಧ್ಯಕ್ಷೀಯ ಅಧಿಕಾರಿಗಳ (ಸಿಎಸ್‌ಪಿಒಸಿ) 28ನೇ ಸಮ್ಮೇಳನಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗೈರಾಗಿರುವುದು ಚರ್ಚೆಗೆ ಕಾರಣವಾಗಿದೆ. ರಾಹುಲ್ ನಡೆಯುನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಸಿಎಸ್‌ಪಿಒಸಿ ಸಮ್ಮೇಳನದ ಕುರಿತು ರಾಹುಲ್‌ಗೆ ಆಹ್ವಾನವೇ ಇರಲಿಲ್ಲ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಇಂದು (ಶುಕ್ರವಾರ, ಜ.16) ಆಯೋಜಿಸಿರುವ ಔತಣಕೂಟಕ್ಕಷ್ಟೇ ಆಹ್ವಾನಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ರಾಹುಲ್ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ.
ಸಿಎಸ್‌ಪಿಒಸಿ ಸಮ್ಮೇಳನಕ್ಕೆ ರಾಹುಲ್ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂಬುದನ್ನು ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ಮೂಲಗಳು ಖಚಿತಪಡಿಸಿವೆ.
ವಿದೇಶಾಂಗ ವ್ಯವಹಾರಗಳ ಸಮಿತಿ ಸದಸ್ಯರಷ್ಟೇ ಸಮ್ಮೇಳನಕ್ಕೆ ಹಾಜರಾಗಿದ್ದರು ಎನ್ನಲಾಗಿದೆ. ಆದರೆ, ಅದು ಇನ್ನಷ್ಟೇ ಖಚಿತವಾಗಬೇಕಿದೆ. ವಿದೇಶಾಂಗ ವ್ಯವಹಾರಗಳ ಸಮಿತಿಯಲ್ಲಿರುವ ಕೇರಳ ಸಂಸದ ಶಶಿ ತರೂರ್ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ನ ಪ್ರಮುಖ ನಾಯಕ.
ಉಪರಾಷ್ಟ್ರಪತಿಯವರು ಆಯೋಜಿಸಿರುವ ಔತಣಕೂಟಕ್ಕೆ ರಾಹುಲ್‌ಗೆ ಆಹ್ವಾನ ನೀಡಲಾಗಿದೆಯಾದರೂ, ಅವರು ಪಾಲ್ಗೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಸಿಎಸ್‌ಪಿಒಸಿ ಸಮ್ಮೇಳನದ ಆಹ್ವಾನದ ವಿಚಾರವಾಗಿ ಕಾಂಗ್ರೆಸ್ ನಾಯಕರು ಲೋಕಸಭೆಯ ಸ್ಪೀಕರ್ ಅವರೊಂದಿಗೆ ಚರ್ಚಿಸಿದ್ದಾರೆ.
'ಪ್ರಜಾಪ್ರಭುತ್ವದ ಬಗ್ಗೆ ರಾಹುಲ್‌ಗೆ ಗೌರವವಿಲ್ಲ'
ರಾಹುಲ್ ಗಾಂಧಿ ಅವರಿಗೆ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ ಎಂದು ಬಿಜೆಪಿ ಸಂಸದೆ ಜಗದಾಂಬಿಕಾ ಪಾಲ್ ಆರೋಪಿಸಿದ್ದಾರೆ. 'ಸ್ಪೀಕರ್ ಅವರು ಆಯೋಜಿಸಿದ್ದ ಇಂತಹ ಕಾರ್ಯಕ್ರಮದಲ್ಲಿ, ರಾಹುಲ್ ಅವರೂ ಪಾಲ್ಗೊಂಡು ವಿದೇಶಗಳ ಪ್ರತಿನಿಧಿಗಳನ್ನು ಸ್ವಾಗತಿಸಬೇಕಿತ್ತು' ಎಂದಿದ್ದಾರೆ.
ದೇಶದ ಘನತೆಯನ್ನು ಸಾರುವ ಕಾರ್ಯಕ್ರಮ ಇದಾಗಿರುವುದರಿಂದ ರಾಹುಲ್ ಅವರು ಭಾಗವಹಿಸಬೇಕಿತ್ತು ಎಂದು ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ಹೇಳಿದ್ದಾರೆ.
'ನಮ್ಮದು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ನಮ್ಮ ಸಂವಿಧಾನ, ನಮ್ಮಲ್ಲಿರುವ ಚುನಾವಣಾ ಪ್ರಕ್ರಿಯೆ, ನಮ್ಮ ಆಡಳಿತದ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಹ ಕ್ಷಣದಲ್ಲಿ ರಾಹುಲ್ ಗಾಂಧಿಯೂ ಇರಬೇಕಿತ್ತು' ಎಂದು ಜೆಡಿ(ಯು) ರಾಜ್ಯಸಭಾ ಸದಸ್ಯ ಸಂಜಯ್ ಕುಮಾರ್ ಝಾ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.