ADVERTISEMENT

ಕೋಲ್ಕತ್ತ | ಮೆಸ್ಸಿ ನೋಡಲು ಸಿಗದ ಅವಕಾಶ; ಅಭಿಮಾನ ಆಕ್ರೋಶಕ್ಕೆ ತಿರುಗಿದ್ದು ಹೇಗೆ?

ಪ್ರೇಕ್ಷಕರಿಂದ ಕುರ್ಚಿ, ಟೆಂಟ್‌ ಧ್ವಂಸ * ಮುಖ್ಯ ಆಯೋಜಕನ ಸೆರೆ

ಪಿಟಿಐ
Published 13 ಡಿಸೆಂಬರ್ 2025, 17:47 IST
Last Updated 13 ಡಿಸೆಂಬರ್ 2025, 17:47 IST
<div class="paragraphs"><p>ಲಯೊನೆಲ್‌ ಮೆಸ್ಸಿ ಅವರನ್ನು ಭೇಟಿಯಾಗುವುದಕ್ಕೆ ಅವಕಾಶ ಕಲ್ಪಿಸುವಂತೆ ಫುಟ್‌ಬಾಲ್‌ ಪ್ರೇಮಿಯೊಬ್ಬ ಕೋಲ್ಕತ್ತದಲ್ಲಿ ಶನಿವಾರ ಪೊಲೀಸರಿಗೆ ಅಂಗಲಾಚುತ್ತಿದ್ದರು&nbsp;   </p></div>

ಲಯೊನೆಲ್‌ ಮೆಸ್ಸಿ ಅವರನ್ನು ಭೇಟಿಯಾಗುವುದಕ್ಕೆ ಅವಕಾಶ ಕಲ್ಪಿಸುವಂತೆ ಫುಟ್‌ಬಾಲ್‌ ಪ್ರೇಮಿಯೊಬ್ಬ ಕೋಲ್ಕತ್ತದಲ್ಲಿ ಶನಿವಾರ ಪೊಲೀಸರಿಗೆ ಅಂಗಲಾಚುತ್ತಿದ್ದರು 

   

-ಪಿಟಿಐ ಚಿತ್ರ 

ಕೋಲ್ಕತ್ತ: ಫುಟ್‌ಬಾಲ್ ದಿಗ್ಗಜ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ, ಹಠಾತ್ತನೇ ನಿರ್ಗಮಿಸಿದ್ದರಿಂದ ನಿರಾಸೆಗೊಂಡ ಅವರ ಅಭಿಮಾನಿಗಳು ಆಕ್ರೋಶಗೊಂಡು ದಾಂದಲೆ ನಡೆಸಿದ್ದಕ್ಕೆ ಇಲ್ಲಿನ ಸಾಲ್ಟ್‌ ಲೇಕ್‌ ಕ್ರೀಡಾಂಗಣ ಶನಿವಾರ ಸಾಕ್ಷಿಯಾಯಿತು.

ADVERTISEMENT

ನೂರಾರು ಜನರು ತಡೆಗೋಡೆಗಳನ್ನು ದಾಟಿ ಕ್ರೀಡಾಂಗಣಕ್ಕೆ ನುಗ್ಗಿ, ಪಿಚ್‌ಗೆ ಹಾನಿ ಮಾಡಿದರು. ಸಮೀಪದಲ್ಲಿಯೇ ಅಳವಡಿಸಿದ್ದ ಬ್ಯಾನರ್‌ಗಳು ಹಾಗೂ ಟೆಂಟ್‌ಗಳನ್ನು ಧ್ವಂಸಗೊಳಿಸಿದರು.

ಈ ಘಟನೆ ಬೆನ್ನಲ್ಲೇ, ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತ ಅವರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ರಾಜೀವ್‌ ಕುಮಾರ್‌ ಹೇಳಿದ್ದಾರೆ.

‘ಕಾರ್ಯಕ್ರಮವನ್ನು ಸರಿಯಾಗಿ ನಿರ್ವಹಣೆ ಮಾಡದ್ದಕ್ಕಾಗಿ ನನಗೆ ಆಘಾತ ಹಾಗೂ ನೋವಾಗಿದೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

‘ಈ ದುರದೃಷ್ಟಕರ ಘಟನೆಗಾಗಿ ಲಯೊನೆಲ್‌ ಮೆಸ್ಸಿ, ಅವರ ಅಭಿಮಾನಿಗಳು ಹಾಗೂ ಕ್ರೀಡಾ ಪ್ರೇಮಿಗಳಲ್ಲಿ ನಾನು ಕ್ಷಮೆ ಕೋರುತ್ತೇನೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಆಕ್ರೋಶಕ್ಕೆ ಕಾರಣ: ‘ಗೋಟ್ (GOAT - Greatest Of All Time) ಟೂರ್ ಆಫ್ ಇಂಡಿಯಾ 2025’ ಕಾರ್ಯಕ್ರಮದ ಅಂಗವಾಗಿ ಮೆಸ್ಸಿ ಭಾರತಕ್ಕೆ ಭೇಟಿ ನೀಡಿದ್ದು, ಅವರ ಮೂರು ದಿನಗಳ ಪ್ರವಾಸ ಶನಿವಾರ ಆರಂಭವಾಗಿತ್ತು.

ಬೆಳಿಗ್ಗೆ ಅವರು, 70 ಅಡಿ (21 ಮೀಟರ್) ಎತ್ತರದ ತಮ್ಮ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ನಂತರ, ಸಾಲ್ಟ್‌ ಲೇಕ್ ಸ್ಟೇಡಿಯಂಗೆ (ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ) ಮೆಸ್ಸಿ ಬೆಳಿಗ್ಗೆ 11.30ರ ವೇಳೆಗೆ ಬಂದರು. ಅವರೊಂದಿಗೆ ಸಹ ಆಟಗಾರರಾದ ಲೂಯಿಸ್‌ ಸೊರೇಝ್‌ ಹಾಗೂ ರಾಡ್ರಿಗೊ ಡಿ ಪಾಲ್‌ ಅವರೂ ಇದ್ದರು. 

ವಾಹನದಿಂದ ಇಳಿದು, ಸ್ಟೇಡಿಯಂ ಪ್ರವೇಶಿಸಿದ ಬೆನ್ನಲ್ಲೇ, ವಿಐಪಿಗಳು, ಆಯೋಜಕರು, ರಾಜಕಾರಣಿಗಳು, ಖ್ಯಾತನಾಮರು ಹಾಗೂ ಭದ್ರತಾ ಸಿಬ್ಬಂದಿ ಮೆಸ್ಸಿ ಅವರನ್ನು ಸುತ್ತುವರಿದರು. 

ಅಲ್ಲಿ ಜಮಾಯಿಸಿದ್ದ ಸಾವಿರಾರು ಅಭಿಮಾನಿಗಳು ಹರ್ಷೋದ್ಗಾರಗಳಿಂದ ಅವರಿಗೆ ಸ್ವಾಗತ ಕೋರಿದರು. ಅವರ ಚಿತ್ರ, ಹೆಸರು ಉಳ್ಳ ಜೆರ್ಸಿ ಧರಿಸಿದ್ದ ಅಭಿಮಾನಿಗಳು, ಅರ್ಜೆಂಟೀನಾ ಧ್ವಜವನ್ನು ಬೀಸುತ್ತಾ, ‘ಮೆಸ್ಸಿ, ಮೆಸ್ಸಿ’ ಎಂಬ ಘೋಷಣೆಗಳನ್ನು ಕೂಗಿ, ಸಂಭ್ರಮಿಸಿದರು.

ಭಾರಿ ಭದ್ರತೆ ಇದ್ದ ಕಾರಣ ಮೆಸ್ಟಿ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗಲಿಲ್ಲ. ಸಿಟ್ಟಿಗೆದ್ದ ಅಭಿಮಾನಿಗಳು ನೂಕಾಟ ಆರಂಭಿಸಿದರು. 

ಇನ್ನೊಂದೆಡೆ, ಮೆಸ್ಸಿ ಅವರು ಪಿಚ್‌ ಬಳಿ ಬಂದು, ಕೆಲ ದೂರ ನಡೆದು, ಅಭಿಮಾನಿಗಳತ್ತ ಕೈಬೀಸಿದರು. ನಿರೀಕ್ಷೆಗಿಂತಲೂ ಮುಂಚಿತವಾಗಿಯೇ ಕ್ರೀಡಾಂಗಣದಿಂದ ನಿರ್ಗಮಿಸಿದರು. ಇದು ಕೂಡ ಅಭಿಮಾನಿಗಳು ರೊಚ್ಚಿಗೇಳಲು ಕಾರಣವಾಯಿತು.

ಆಗ, ನೂರಾರು ಜನರು ಪ್ರೇಕ್ಷಕರ ಗ್ಯಾಲರಿಯಲ್ಲಿನ ಕುರ್ಚಿಗಳನ್ನು ಧ್ವಂಸಗೊಳಿಸಿ, ಮೈದಾನದತ್ತ ತೂರಿದರು. ನೀರಿನ ಬಾಟಲಿಗಳನ್ನು ಟ್ತ್ಯಾಕ್‌ ಮೇಲೆ ಎಸೆದರು. ಕ್ರೀಡಾಂಗಣದೊಳಗೆ ನುಗ್ಗಿದ ಅಭಿಮಾನಿಗಳು ಅಲ್ಲಿ ಅಳವಡಿಸಿದ್ದ ಬ್ಯಾನರ್‌ಗಳು ಹಾಗೂ ಟೆಂಟ್‌ಗಳನ್ನು ಧ್ವಂಸಗೊಳಿಸಿ, ಸಿಟ್ಟು ಹೊರಹಾಕಿದರು.

ಕೆಲವರು ದಿಢೀರ್‌ನೆ ಪ್ರತಿಭಟನೆ ಆರಂಭಿಸಿ, ಕ್ರೀಡಾ ಸಚಿವ ಆರೂಪ್ ಬಿಸ್ವಾಸ್‌ ಹಾಗೂ ಆಯೋಜಕ ಶತಾದ್ರು ದತ್ತ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.

‘ಮೆಸ್ಸಿ ಅವರು ಸ್ಟೇಡಿಯಂನಿಂದ ನಿರ್ಗಮಿಸಿದ ಬೆನ್ನಲ್ಲೇ, ದತ್ತ ಸೇರಿದಂತೆ ಇತರ ಆಯೋಜಕರು ಕೂಡ ಸ್ಥಳದಲ್ಲಿ ಕಾಣಲಿಲ್ಲ. ಇದು ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಯಿತು’ ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದರು.

ಹತಾಶೆ: ‘ನನಗೆ ಮೆಸ್ಸಿ ಅವರನ್ನು ಹತ್ತಿರದಿಂದ ನೋಡುವುದೇ ಸಂತಸದ ವಿಷಯ. ಇದು ನನ್ನ ಕನಸು ಕೂಡ ಆಗಿತ್ತು. ಆದರೆ, ಕಾರ್ಯಕ್ರಮವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ, ನನ್ನ ನೆಚ್ಚಿನ ಆಟಗಾರನನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಕಳೆದುಕೊಂಡೆ’ ಎಂದು 37 ವರ್ಷದ ನವೀನ್ ಚಟರ್ಜಿ ಹೇಳಿದರು.

‘ನಾನು ₹5 ಸಾವಿರ ಕೊಟ್ಟು ಟಿಕೆಟ್‌ ಖರೀದಿಸಿದ್ದೆ. ರಾಜಕಾರಣಿಗಳನ್ನಲ್ಲ, ಮೆಸ್ಸಿ ನೋಡುವುದಕ್ಕಾಗಿ ಮಗನೊಂದಿಗೆ ಬಂದಿದ್ದೆ. ನಮಗೆ ನೋಡಲು ಅವಕಾಶ ಸಿಗಲಿಲ್ಲ. ಆದರೆ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇಂಥ ಅವ್ಯವಸ್ಥೆಗೆ ಕಾರ್ಯಕ್ರಮ ಆಯೋಜಕರನ್ನೇ ಹೊಣೆ ಮಾಡಬೇಕು’ ಎಂದು ಅಜಯ್‌ ಶಾಹ ದೂರಿದರು.

‘ಕೆಲವರು ತಮ್ಮ ತಿಂಗಳ ವೇತನ ಖರ್ಚು ಮಾಡಿ, ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ’ ಎಂದೂ ಕೆಲವರು ಹೇಳಿದ್ದಾರೆ.

ಹೈದರಾಬಾದ್‌ನತ್ತ: ಕೋಲ್ಕತ್ತದಲ್ಲಿನ ಕಾರ್ಯಕ್ರಮ ಮುಗಿಸಿಕೊಂಡ ಬಳಿಕ ಮೆಸ್ಸಿ ಅವರು ಹೈದರಾಬಾದ್‌ಗೆ ತೆರಳಿದರು. 

ಪ್ರಮುಖ ಅಂಶಗಳು

* ಸ್ಟೇಡಿಯಂನಲ್ಲಿ ಅಳವಡಿಸಿದ್ದ ದೊಡ್ಡ ಪರದೆಗಳಲ್ಲಿ ಕೂಡ ಮೆಸ್ಸಿ ಅವರನ್ನು ಸ್ಪಷ್ಟವಾಗಿ ತೋರಿಸಲಿಲ್ಲ– ಜನರ ದೂರು

* ಪ್ರೇಕ್ಷಕರ ದಟ್ಟಣೆ ನಿಯಂತ್ರಿಸಲು ಪೊಲೀಸರ ಹರಸಾಹಸ. ಅನಧಿಕೃತ ವ್ಯಕ್ತಿಗಳು ಕ್ರೀಡಾಂಗಣದಿಂದ ಹೊರ ಹೋಗುವಂತೆ ಧ್ವನಿವರ್ಧಕ ಮೂಲಕ ಮಾಡಿದ ಮನವಿಗಳೂ ಫಲ ನೀಡಲಿಲ್ಲ

* ಕಾರ್ಯಕ್ರಮ ಗೊಂದಲದ ಗೂಡಾದ ಕಾರಣ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಾಲಿವುಡ್‌ ನಟ ಶಾರುಕ್‌ ಖಾನ್ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ 

ಫುಟ್‌ಬಾಲ್‌ ದಿಗ್ಗಜ ಲಯೊನೆಲ್‌ ಮೆಸ್ಸಿ ಅವರು ಕೋಲ್ಕತ್ತದ ಸಾಲ್ಟ್‌ ಲೇಕ್‌ ಸ್ಟೇಡಿಯಂಗೆ ಭೇಟಿ ನೀಡಿದ ವೇಳೆ ದಾಂದಲೆ ಭುಗಿಲೆದ್ದ ಕಾರಣ ಮೆಸ್ಸಿ ಉಳಿದುಕೊಂಡಿದ್ದ ಹೋಟೆಲ್‌ ಮುಂದೆ ಅವರ ಅಭಿಮಾನಿಗಳು ಶನಿವಾರ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು ಪಿಟಿಐ ಚಿತ್ರ
‘ಗೋಟ್ ಟೂರ್ ಆಫ್ ಇಂಡಿಯಾ 2025’ ಕಾರ್ಯಕ್ರಮದ ಅಂಗವಾಗಿ ಕೋಲ್ಕತ್ತಕ್ಕೆ ಶನಿವಾರ ಭೇಟಿ ನೀಡಿದ್ದ ಫುಟ್‌ಬಾಲ್‌ ಆಟಗಾರ ಲಯೊನೆಲ್ ಮೆಸ್ಸಿ ಸಾಲ್ಟ್‌ ಲೇಕ್‌ ಸ್ಟೇಡಿಯಂನಲ್ಲಿ ಅಭಿಮಾನಿಗಳತ್ತ ಕೈಬೀಸಿದರು   ಪಿಟಿಐ ಚಿತ್ರ 
ಕೋಲ್ಕತ್ತದಲ್ಲಿ ಪ್ರತಿಷ್ಠಾಪಿಸಿರುವ ಲಯೊನೆಲ್‌ ಮೆಸ್ಸಿ ಅವರ 70 ಅಡಿ ಎತ್ತರದ ಪ್ರತಿಮೆಯನ್ನು ಶನಿವಾರ ಅನಾವರಣ ಮಾಡಲಾಯಿತು  ಪಿಟಿಐ ಚಿತ್ರ 

ತನಿಖೆ: ಸಮಿತಿ ರಚನೆ

‘ಸಾಲ್ಟ್‌ ಲೇಕ್‌ ಸ್ಟೇಡಿಯಂನಲ್ಲಿ ನಡೆದ ದಾಂದಲೆ ಕುರಿತು ತನಿಖೆ ನಡೆಸುವುದಕ್ಕಾಗಿ ಕಲ್ಕತ್ತ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಸೀಮಕುಮಾರ್‌ ರೇ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ‘ಸರ್ಕಾರದ ಮುಖ್ಯ ಕಾರ್ಯದರ್ಶಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಮಿತಿ ಸದಸ್ಯರಾಗಿರುವರು. ಈ ದಾಂದಲೆಗೆ ಕಾರಣರಾದವರ ಮೇಲೆ ಹೊಣೆಗಾರಿಕೆ ನಿಗದಿ ಮಾಡುವ ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಿತಿ ಶಿಫಾರಸು ಮಾಡಲಿದೆ’ ಎಂದು ಅವರು ಹೇಳಿದ್ದಾರೆ.

‘ಟಿಕೆಟ್‌ ಹಣ ಮರುಪಾವತಿ’

‘ಘಟನೆಗೆ ಸಂಬಂಧಿಸಿ ಮುಖ್ಯ ಆಯೋಜಕನನ್ನು ಬಂಧಿಸಲಾಗಿದೆ. ಪ್ರೇಕ್ಷಕರಿಗೆ ಟಿಕೆಟ್‌ ಹಣವನ್ನು ಮರುಪಾವತಿ ಮಾಡುವುದಾಗಿ ಆಯೋಜಕ ಲಿಖಿತವಾಗಿ ಭರವಸೆ ನೀಡಿದ್ದಾನೆ’ ಎಂದು ಡಿಜಿಪಿ ರಾಜೀವ್‌ ಕುಮಾರ್‌ ಹೇಳಿದ್ದಾರೆ. ‘ಮೆಸ್ಸಿ ಅವರು ಸ್ಟೇಡಿಯಂಗೆ ಬಂದು ಪ್ರೇಕ್ಷಕರತ್ತ ಕೈ ಬೀಸಿ ಆಯ್ದ ಜನರನ್ನು ಭೇಟಿ ಮಾಡಿ ಅಲ್ಲಿಂದ ನಿರ್ಗಮಿಸುವುದೆಂದು ಕಾರ್ಯಕ್ರಮ ಯೋಜಿಸಲಾಗಿತ್ತು. ನಿರ್ವಹಣೆ ವಿಚಾರವಾಗಿ ಆಯೋಜಕರ ಕಡೆಯಿಂದ ಏನಾದರೂ ವೈಫಲ್ಯವಾಗಿದೆಯೇ ಎಂಬ ಬಗ್ಗೆ ಸರ್ಕಾರ ರಚಿಸಿರುವ ಸಮಿತಿ ಪರಿಶೀಲಿಸಲಿದೆ’ ಎಂದು ಅವರು ಹೇಳಿದ್ದಾರೆ.

‘ಕಾಳಸಂತೆಯಲ್ಲಿ ಟಿಕೆಟ್‌ ಮಾರಾಟ’

ಲಯೊನೆಲ್‌ ಮೆಸ್ಸಿ ಕಾರ್ಯಕ್ರಮದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂದು ಕೆಲ ಪ್ರೇಕ್ಷಕರು ದೂರಿದ್ದಾರೆ. ಕ್ರೀಡಾಂಗಣದಲ್ಲಿ 50 ಸಾವಿರದಷ್ಟು ಜನರು ಸೇರಿದ್ದರು. ಕೆಲವರು ₹4 ಸಾವಿರದಿಂದ ₹12 ಸಾವಿರ ವರೆಗೆ ಪಾವತಿಸಿ ಟಿಕೆಟ್‌ ಖರೀದಿಸಿದ್ದರು. ಕೆಲವರು ₹20 ಸಾವಿರ ನೀಡಿ ಕಾಳಸಂತೆಯಲ್ಲಿ ಟಿಕೆಟ್‌ ಖರೀದಿಸಿದ್ದರು ಎನ್ನಲಾಗಿದೆ. ‘ಕಾರ್ಯಕ್ರಮ ನಡೆದ ಸ್ಥಳದಲ್ಲಿ ತಂಪು ಪಾನೀಯಗಳನ್ನು ₹150ರಿಂದ ₹200ಕ್ಕೆ ಮಾರಾಟ ಮಾಡಲಾಗುತ್ತಿತ್ತು. ನೀರಿನ ಬಾಟಲಿ ಬೆಲೆ ₹200 ಇತ್ತು’ ಎಂದು ಪ್ರೇಕ್ಷಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.