ADVERTISEMENT

ದಿಗ್ವಿಜಯ್‌ ವಿರುದ್ಧ ಸಾಧ್ವಿ ಪ್ರಜ್ಞಾ ಬಿಜೆಪಿ ಅಭ್ಯರ್ಥಿ

ಪಿಟಿಐ
Published 9 ಮೇ 2019, 17:08 IST
Last Updated 9 ಮೇ 2019, 17:08 IST
   

ಭೋಪಾಲ್‌: 2008ರ ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಬಿಜೆಪಿಗೆ ಬುಧವಾರ ಸೇರ್ಪಡೆಯಾಗಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ ಲೋಕಸಭಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಅವರು ಇಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ. ಹಾಗಾಗಿ ಇಲ್ಲಿ ತೀವ್ರ ಸ್ಪರ್ಧೆ ನಿರೀಕ್ಷಿಸಲಾಗಿದೆ.

ಪ್ರಜ್ಞಾ ಅವರು ಬಿಜೆಪಿ ಸೇರಿದ ಕೆಲವೇ ತಾಸಿನಲ್ಲಿ ಭೋಪಾಲ್‌ನಿಂದ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಹಿಂದುತ್ವವನ್ನು ಚುನಾವಣಾ ಪ್ರಚಾರದ ಮುಂಚೂಣಿಗೆ ತರುವುದು ಈ ನಿರ್ಧಾರದ ಹಿಂದಿನ ಉದ್ದೇಶ ಎನ್ನಲಾಗಿದೆ.

ADVERTISEMENT

ಪ್ರಜ್ಞಾ ಅವರು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ ಅವರ ವಿರುದ್ಧ ಕಠಿಣವಾದ ಮೋಕಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಈ ಕಾಯ್ದೆಯನ್ನು ಈಗ ರಾಷ್ಟ್ರೀಯ ತನಿಖಾ ತಂಡವು (ಎನ್‌ಐಎ) ಕೈಬಿಟ್ಟಿದೆ. ಹಾಗಿದ್ದರೂ ಅವರು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ಮಧ್ಯ ಪ್ರದೇಶದ ಬಿಂಧ್‌ ಜಿಲ್ಲೆಯವರಾದ ಪ್ರಜ್ಞಾ ಅವರು ಸುದೀರ್ಘ ಕಾಲದಿಂದ ಸಂಘ ಪ‍ರಿವಾರದ ಜತೆಗೆ ನಂಟು ಹೊಂದಿದ್ದಾರೆ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿದ್ದರು. ಬಳಿಕ ವಿಶ್ವಹಿಂದೂ ಪರಿಷತ್‌ನ ಮಹಿಳಾ ಘಟಕ ದುರ್ಗಾ ವಾಹಿನಿಯಲ್ಲಿ ಸಕ್ರಿಯರಾಗಿದ್ದರು.

1989ರಿಂದಲೇ ಭೋಪಾಲ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಿದೆ. ಈ ಕ್ಷೇತ್ರದಲ್ಲಿ ಒಟ್ಟು 18 ಲಕ್ಷ ಮತದಾರರಿದ್ದು ಅವರ ಪೈಕಿ 4.5 ಲಕ್ಷ ಮುಸ್ಲಿಮರಾಗಿದ್ದಾರೆ. ದಿಗ್ವಿಜಯ್‌ ಅವರನ್ನು ಇಲ್ಲಿಂದ ಕಣಕ್ಕೆ ಇಳಿಸಲು ಕಾಂಗ್ರೆಸ್‌ ತೀರ್ಮಾನಿಸಿದ ಬಳಿಕ ಅವರನ್ನು ಎದುರಿಸುವ ಸಮರ್ಥ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸಿತ್ತು.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭೋಪಾಲ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಅಲ್ಲದೆ, ಬಿಜೆಪಿ ಗೆದ್ದ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳ ಗೆಲುವಿನ ಅಂತರ ಕಡಿಮೆಯಾಗಿತ್ತು.

***

ಸಾಧ್ವಿ ಪ್ರಜ್ಞಾ ಅವರನ್ನು ಭೋಪಾಲ್‌ಗೆ ಸ್ವಾಗತಿಸುತ್ತೇನೆ. ಸುಂದರ ನಗರದ ಶಾಂತ, ಸುಶಿಕ್ಷಿತ ಮತ್ತು ಘನತೆಯಿಂದ ಕೂಡಿದ ವಾತಾವರಣವು ಅವರನ್ನು ಇಲ್ಲಿಗೆ ಆಕರ್ಷಿರಬಹುದು

-ದಿಗ್ವಿಜಯ್‌ ಸಿಂಗ್‌, ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.