ADVERTISEMENT

ಅಹಮದಾಬಾದ್‌ | ದೇಶದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ: ಕನಿಷ್ಠ 265 ಸಾವು

​ಪ್ರಜಾವಾಣಿ ವಾರ್ತೆ
ರಾಯಿಟರ್ಸ್
ಪಿಟಿಐ
Published 12 ಜೂನ್ 2025, 23:53 IST
Last Updated 12 ಜೂನ್ 2025, 23:53 IST
<div class="paragraphs"><p>ಅಹಮದಾಬಾದ್‌ನಲ್ಲಿ ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಕಟ್ಟಡಕ್ಕೆ ಅಪ್ಪಳಿಸಿದ ಏರ್ ಇಂಡಿಯಾ ವಿಮಾನದ ಅವಶೇಷ</p></div>

ಅಹಮದಾಬಾದ್‌ನಲ್ಲಿ ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಕಟ್ಟಡಕ್ಕೆ ಅಪ್ಪಳಿಸಿದ ಏರ್ ಇಂಡಿಯಾ ವಿಮಾನದ ಅವಶೇಷ

   

–ಪಿಟಿಐ ಚಿತ್ರ

  • ದೇಶದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ

    ADVERTISEMENT
  • ಟೇಕಾಫ್‌ ಆದ 25 ಸೆಕೆಂಡುಗಳಲ್ಲಿ ಪತನ

  • ಅಹಮದಾಬಾದ್‌ನಲ್ಲಿ ಅವಘಡ

  • ಲಂಡನ್‌ಗೆ ಹೊರಟಿದ್ದ ವಿಮಾನ

  • 800 ಅಡಿ ಎತ್ತರಕ್ಕೇರಿದ್ದ ವಿಮಾನ 

  • ವಿಮಾನ ಅಪ್ಪಳಿಸಿದ ಕಟ್ಟಡದಲ್ಲಿದ್ದ ಐವರು ಬಲಿ 

  • ಮೃತರಲ್ಲಿ ಗುಜರಾತ್‌ನ ಮಾಜಿ ಸಿ.ಎಂ ವಿಜಯ್‌ ರೂಪಾನಿ 

ಅಹಮದಾಬಾದ್: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ವಿಶ್ವದಲ್ಲಿ ಸಂಭವಿಸಿದ ಅತಿದೊಡ್ಡ ವಿಮಾನ ದುರಂತಗಳ ಸಾಲಿಗೆ ಸೇರ್ಪಡೆಯಾದ ಈ ಅವಘಡವು ಗುರುವಾರ ಮಧ್ಯಾಹ್ನ 1.39ರ ಸುಮಾರಿಗೆ ಸಂಭವಿಸಿದೆ. ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ವಿಮಾನ ದುರಂತ ಇದಾಗಿದೆ.

ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 242 ಮಂದಿಯನ್ನು ಹೊತ್ತ ವಿಮಾನವು ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಇಲ್ಲಿನ ಬಿ.ಜೆ. ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿದೆ.

‘ರಕ್ಷಣಾ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಅವಶೇಷಗಳಡಿಯಿಂದ 204 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸುಮಾರು 41 ಮಂದಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಅಹಮದಾಬಾದ್‌ ನಗರ ಪೊಲೀಸ್‌ ಆಯುಕ್ತ ಜಿ.ಎಸ್‌.ಮಲಿಕ್‌ ಹೇಳಿದ್ದಾರೆ.

‘ವಿಮಾನದ 11ಎ ಸೀಟಿನಲ್ಲಿದ್ದ ವ್ಯಕ್ತಿ ಬದುಕುಳಿದಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಇನ್ನೂ ಹೆಚ್ಚಿನ ಮಂದಿ ಬದುಕುಳಿದಿರುವ ಸಾಧ್ಯತೆಯಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ವಿಧಿ ಚೌಧರಿ ಮಾಹಿತಿ ನೀಡಿದ್ದಾರೆ. 

ಬದುಕುಳಿದ ಪ್ರಯಾಣಿಕನನ್ನು ವಿಶ್ವಾಸ್‌ ಕುಮಾರ್‌ ರಮೇಶ್‌ ಎಂದು ಗುರುತಿಸಲಾಗಿದೆ. ಮೃತರ ಮತ್ತು ಬದುಕುಳಿದವರ ನಿಖರ ಮಾಹಿತಿ ತಿಳಿದುಬಂದಿಲ್ಲ.

ಬೋಯಿಂಗ್‌ ಕಂಪನಿಯ ವಿಮಾನ (787-8 ಡ್ರೀಮ್‌ಲೈನರ್) ಪೂರ್ಣವಾಗಿ ಮೇಲಕ್ಕೇರಲು ವಿಫಲವಾಗಿ ನೆಲಕ್ಕೆ ಅಪ್ಪಳಿಸಿ ಬೆಂಕಿಯ ಉಂಡೆಯಾಗಿ ಸಿಡಿಯಿತು. ದಟ್ಟ ಹೊಗೆ ಎದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಉದ್ಯೋಗ, ಕುಟುಂಬ ಸದಸ್ಯರನ್ನು ಸೇರಿಕೊಳ್ಳಲು ಮತ್ತು ಪ್ರವಾಸ ಸೇರಿದಂತೆ ವಿವಿಧ ಉದ್ದೇಶದಿಂದ ವಿಮಾನವೇರಿದವರ ಕನಸುಗಳು ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆಯಲ್ಲಿ ಕರಟಿ ಹೋದವು.  

ವಿಮಾನ ನಿಲ್ದಾಣದ ಸಮೀಪದ ಮೇಘನಿನಗರದಲ್ಲಿನ ಬಿ.ಜೆ ವೈದ್ಯಕೀಯ ಕಾಲೇಜಿನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ದಾದಿಯರ ವಸತಿ ನಿಲಯ ಸಮುಚ್ಛಯದ ಮೇಲೆ ವಿಮಾನ ಬಿದ್ದಿದೆ. ಅಲ್ಲಿನ ಕಟ್ಟಡದಲ್ಲಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿರುವುದು, ಪ್ರಯಾಣಿಕರ ಸುಟ್ಟು ಕರಕಲಾದ ದೇಹಗಳನ್ನು ದುರಂತದ ಸ್ಥಳದಿಂದ ಆಸ್ಪತ್ರೆಗಳಿಗೆ ಸಾಗಿಸುವ ದೃಶ್ಯಗಳನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವುದನ್ನೂ ಕೆಲವು ವಿಡಿಯೊಗಳು ತೋರಿಸಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಒಳಗೊಂಡಂತೆ ವಿಶ್ವದ ವಿವಿಧ ದೇಶಗಳ ನಾಯಕರು ದುರಂತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. 

ಸುದೀರ್ಘ ಪ್ರಯಾಣಕ್ಕಾಗಿ ಭಾರಿ ಪ್ರಮಾಣದ ಇಂಧನ ತುಂಬಿಸಿದ್ದರಿಂದ ವಿಮಾನವು ಬಿದ್ದಾಗ ಉಂಟಾದ ಬೆಂಕಿಯ ಪ್ರಮಾಣ ಹೆಚ್ಚಲು ಕಾರಣ ಎಂದು ವರದಿಗಳು ತಿಳಿಸಿವೆ.

ಬಿಜೆಪಿ ಮುಖಂಡ, ಎರಡು ಬಾರಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ವಿಜಯ್‌ ರೂಪಾನಿ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ‘ಇದು ತುಂಬಾ ದುಃಖಕರ ಘಟನೆ. ವಿಜಯ್ ರೂಪಾನಿ ಅವರನ್ನು ನಾವು ಅಪಘಾತದಲ್ಲಿ ಕಳೆದುಕೊಂಡಿದ್ದೇವೆ’ ಎಂದು ಕೇಂದ್ರ ಸಚಿವ ಸಿ.ಆರ್‌.ಪಾಟೀಲ್‌ ತಿಳಿಸಿದ್ದಾರೆ.

ಘಟನೆಯ ಬೆನ್ನಲ್ಲೇ, ಅಹಮದಾಬಾದ್‌ ವಿಮಾನ ನಿಲ್ದಾಣ ತನ್ನ ಎಲ್ಲ ಕಾರ್ಯಾಚರಣೆಗಳನ್ನು ಸಂಜೆಯವರೆಗೆ ಸ್ಥಗಿತಗೊಳಿಸಿತು. ಇಲ್ಲಿಗೆ ಬಂದಿಳಿಯಬೇಕಿದ್ದ ಹಲವು ವಿಮಾನಗಳು ಮಾರ್ಗ ಬದಲಿಸಿ ಬೇರೆ ನಿಲ್ದಾಣಗಳಲ್ಲಿ ಇಳಿದವು.

ದುರಂತಕ್ಕೆ ಏನು ಕಾರಣ ಎಂಬುದನ್ನು ತಿಳಿಯಲು ವಿಮಾನದ ಬ್ಲ್ಯಾಕ್‌ ಬಾಕ್ಸ್, ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ಗಾಗಿ ಹುಡುಕಾಟ ನಡೆಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ.

‘ನಾವು ಸ್ಥಳಕ್ಕೆ ತಲುಪಿದಾಗ ಹಲವಾರು ಮೃತದೇಹಗಳು ಸುತ್ತಲೂ ಬಿದ್ದಿದ್ದವು ಮತ್ತು ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುತ್ತಿದ್ದರು. ಅನೇಕ ಮೃತದೇಹಗಳು ಸುಟ್ಟು ಹೋಗಿದ್ದವು’ ಎಂದು ಸ್ಥಳೀಯ ನಿವಾಸಿ ಪೂನಂ ಪಾಟ್ನಿ ಅವರು ತಾವು ಕಂಡ ದೃಶ್ಯವನ್ನು ವಿವರಿಸಿದ್ದಾರೆ. 

ಅಹಮದಾಬಾದ್ ವಿಮಾನ ದುರಂತ ನನ್ನನ್ನು ದಿಗ್ಭ್ರಾಂತನನ್ನಾಗಿಸಿದೆ. ಇದು ಪದಗಳಲ್ಲಿ ಹೇಳಲಾಗದ, ಹೃದಯವಿದ್ರಾವಕ ಘಟನೆ. ಗಾಸಿಗೊಂಡವರಿಗಾಗಿ ಈ ನೋವಿನ ಸಮಯದಲ್ಲಿ ಪ್ರಾರ್ಥಿಸುವೆ. ಅವರ ಕುಟುಂಬ ಸದಸ್ಯರ ಜತೆಗೆ ನಾನಿದ್ದೇನೆ
ನರೇಂದ್ರ ಮೋದಿ, ಪ್ರಧಾನಿ

ಎಟಿಸಿಗೆ ಕರೆ ಮಾಡಿದ್ದ ಪೈಲಟ್

ವಿಮಾನದ ಪೈಲಟ್‌, ಟೇಕಾಫ್‌ ಆದ ಕೂಡಲೇ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ (ಎಟಿಸಿ) ವಿಭಾಗಕ್ಕೆ ‘ಮೇ ಡೇ’ (ತುರ್ತು ಸಮಸ್ಯೆ ಕಾಣಿಸಿಕೊಂಡಿದೆ ಎಂಬ ಸಂದೇಶ) ಕರೆ ಮಾಡಿದ್ದರು. 

ಆದರೆ, ಎಟಿಸಿ ಮಾಡಿದ ಕರೆಗೆ ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತಿಳಿಸಿದೆ.

ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದ 23ನೇ ನಂಬರ್‌ನ ರನ್‌ವೇನಿಂದ ಟೇಕಾಫ್‌ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಎಷ್ಟು ಮಂದಿಯಿದ್ದರು?

230 ಪ್ರಯಾಣಿಕರು

10 ಸಿಬ್ಬಂದಿ

2 ಪೈಲಟ್/ ಸಹ ಪೈಲಟ್

***

11 ಮಕ್ಕಳು ವಿಮಾನದಲ್ಲಿದ್ದರು

ಯಾವ ದೇಶದವರು?

169–ಭಾರತ

53–ಬ್ರಿಟನ್

7–ಪೋರ್ಚುಗಲ್

1–ಕೆನಡಾ 

ಏರ್ ಇಂಡಿಯಾ ವಿಮಾನ ದುರಂತ ಹೃದಯವಿದ್ರಾವಕವಾಗಿದೆ. ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಯ ಕುಟುಂಬಗಳ ನೋವು ಮತ್ತು ಯಾತನೆ ಊಹಿಸಲಾಗದು. ಸಂಕಷ್ಟದ ಸಮಯದಲ್ಲಿ ಅವರೆಲ್ಲರಿಗೂ ದುಃಖ ಭರಿಸುವ ಶಕ್ತಿ ದೊರಕಲಿ
ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ

ವಿಮಾನ ದುರಂತ...

* ವಿಮಾನವು ಟೇಕಾಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ, 625 ಅಡಿ ಎತ್ತರದಲ್ಲಿದ್ದಾಗ ತುರ್ತುಸ್ಥಿತಿಯ ಸಂದೇಶ ರವಾನೆಯಾಯಿತು ಎಂದು ‘ಫ್ಲೈಟ್‌ರೇಡಾರ್24’ ತಿಳಿಸಿತು

* ಮತ್ತಷ್ಟು ಮೇಲೇರಲು ಸಾಧ್ಯವಾಗದೆ ವಿಮಾನವು ಭೂಮಿಯತ್ತ ಕುಸಿಯಲಾರಂಭಿಸಿತು

* ಅಹಮದಾಬಾದ್ ಸಿವಿಲ್ ಆಸ್ಪತ್ರೆ ಕಟ್ಟಡಕ್ಕೆ ಅಪ್ಪಳಿಸಿದ ತಕ್ಷಣವೇ ಬೆಂಕಿಯ ದೊಡ್ಡ ಉಂಡೆ ಮೂಡಿತು, ದಟ್ಟ ಹೊಗೆ ಆವರಿಸಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.