ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ನಡೆದ ಸಭೆಯಲ್ಲಿ ಪಾಲ್ಗೊಂಡ ಡಿ.ಕೆ. ಶಿವಕುಮಾರ್ ಅವರನ್ನು ಎಂ.ಕೆ.ಸ್ಟಾಲಿನ್ ಸನ್ಮಾನಿಸಿದರು. ಡಿಎಂಕೆ ಮುಖಂಡರಾದ ದೊರೈ ಮುರುಗನ್, ಕನಿಮೋಳಿ ಇದ್ದಾರೆ.
ಪಿಟಿಐ ಚಿತ್ರ
ಚೆನ್ನೈ: ‘ಕೇಂದ್ರ ಸರ್ಕಾರ ಕೇವಲ ಜನಸಂಖ್ಯೆ ಆಧಾರದ ಮೇಲೆ ಮಾತ್ರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಮುಂದಾಗಿದ್ದು, ಇದರಿಂದ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಪಂಜಾಬ್ ಸೇರಿದಂತೆ ಪ್ರಗತಿಪರ ರಾಜ್ಯಗಳ ರಾಜಕೀಯ ಧ್ವನಿ ಹತ್ತಿಕ್ಕಲಾಗುತ್ತದೆ’ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಳವಳ ವ್ಯಕ್ತಪಡಿಸಿದರು.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕರೆದಿದ್ದ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ಸಭೆಯಲ್ಲಿ ಅವರು ಶನಿವಾರ ಮಾತನಾಡಿದ ಅವರು, ಕರ್ನಾಟಕದ ನಿಲುವನ್ನು ತಿಳಿಸಿದರು.
‘ಕೇವಲ ಜನಸಂಖ್ಯೆ ಮಾತ್ರವಲ್ಲದೇ, ಮಾನವ ಅಭಿವೃದ್ಧಿ, ತೆರಿಗೆ ಕೊಡುಗೆ, ಆಡಳಿತ, ಜನಸಂಖ್ಯೆ ನಿಯಂತ್ರಣದ ಸೂಚ್ಯಂಕಗಳ ಮಾನದಂಡಗಳ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಆಗಬೇಕು. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವುದಾದರೆ, 1971ರ ಜನಗಣತಿ ಆಧಾರದ ಮೇಲೆ ಮರುವಿಂಗಡಣೆ ಮಾಡಬೇಕು‘ ಎಂದು ಆಗ್ರಹಿಸಿದರು.
‘ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸಂಪೂರ್ಣ ಬೆಂಬಲದೊಂದಿಗೆ ಈ ಸಭೆಯಲ್ಲಿ ಮಾತನಾಡುತ್ತಿದ್ದೇನೆ. ಅನಾರೋಗ್ಯದ ಕಾರಣ ಅವರು ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ದೇಶದ ಒಕೂಟ ವ್ಯವಸ್ಥೆಯ ರಕ್ಷಣೆಯ ಈ ಐತಿಹಾಸಿಕ ಹೋರಾಟಕ್ಕೆ ಅವರ ಬೆಂಬಲವಿದೆ’ ಎಂದರು.
‘ದೇಶದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸೇರಿದ್ದೇವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾಗಿರುವ ಒಕ್ಕೂಟ ವ್ಯವಸ್ಥೆಯೇ ಇಂದು ಅಪಾಯಕ್ಕೆ ಸಿಲುಕಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಹಂತ ಹಂತವಾಗಿ ಇಂದು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ದಬ್ಬಾಳಿಕೆಗೆ ತಲೆಬಾಗುವ ಅಥವಾ ಅದನ್ನು ವಿರೋಧಿಸಿ ಮೇಲೇಳುವ ಆಯ್ಕೆ ಮಾತ್ರ ನಮ್ಮ ಮುಂದೆ ಇದೆ. ಹೀಗಾಗಿ ಕರ್ನಾಟಕ, ತಮಿಳುನಾಡು ಸೇರಿದಂತೆ ಈ ಸಭೆಯಲ್ಲಿ ಭಾಗವಹಿಸಿರುವ ಎಲ್ಲಾ ಪ್ರಗತಿಪರ ರಾಜ್ಯಗಳು ಪ್ರತಿರೋಧವನ್ನು ಆಯ್ಕೆ ಮಾಡಿಕೊಂಡಿದ್ದೇವೆ‘ ಎಂದು ತಿಳಿಸಿದರು.
‘ಕೇವಲ ಜನಸಂಖ್ಯೆಯನ್ನೇ ಮಾನದಂಡವಾಗಿಟ್ಟುಕೊಂಡು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗುತ್ತಿದೆ. ಇದು ದಕ್ಷಿಣ ರಾಜ್ಯಗಳ ಮೇಲೆ ನಡೆಸಲಾಗುತ್ತಿರುವ ರಾಜಕೀಯ ದಬ್ಬಾಳಿಕೆ. ಜನಸಂಖ್ಯೆ ನಿಯಂತ್ರಣ, ಅಕ್ಷರಸ್ಥರ ಸಂಖ್ಯೆ ಏರಿಕೆ ಹಾಗೂ ಮಹಿಳೆಯರ ಸಬಲೀಕರಣದಲ್ಲಿ ಯಶಸ್ಸು ಸಾಧಿಸಿರುವ ನಮ್ಮ ರಾಜ್ಯಗಳನ್ನು ಕುಗ್ಗಿಸುವ ಪ್ರಯತ್ನ ಕೇಂದ್ರ ಮಾಡುತ್ತಿದೆ’ ಎಂದರು.
‘ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಇತರೆ ದಕ್ಷಿಣ ಭಾರತದ ರಾಜ್ಯಗಳು ಭಾರತದ ಪ್ರಗತಿಯಲ್ಲಿ ಗಣನೀಯ ಕೊಡುಗೆ ನೀಡಿವೆ. ಈ ರಾಜ್ಯಗಳು ಶಿಕ್ಷಣ, ಆರೋಗ್ಯ ಸುಧಾರಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿವೆ. ಆದರೂ ಕೇಂದ್ರ ಸರ್ಕಾರ ನಮ್ಮ ಸಂಸತ್ ಪ್ರತಿನಿಧಿತ್ವವನ್ನು ಕಡಿತಗೊಳಿಸಲು ಮುಂದಾಗಿದೆ. ಆಮೂಲಕ ರಾಷ್ಟ್ರ ಮಟ್ಟದಲ್ಲಿ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಇದು ಕೇವಲ ಅನ್ಯಾಯ ಮಾತ್ರವಲ್ಲ, ಇದೊಂದು ದ್ರೋಹ. ಉತ್ತಮ ಆಡಳಿತ ಹಾಗೂ ಪ್ರಗತಿ ಸಾಧಿಸಿರುವ ರಾಜ್ಯಗಳಿಗೆ ಮಾನ್ಯತೆ ಸಿಗಬೇಕೇ ಹೊರತು ಕಡೆಗಣಿಸಬಾರದು‘ ಎಂದು ಆಗ್ರಹಿಸಿದರು.
'ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಎಲ್ಲಾ ಪ್ರಗತಿಯ ರಾಜ್ಯಗಳು ಮೌನವಾಗಿರುವುದಿಲ್ಲ. ಈ ವಿಚಾರವಾಗಿ ಸದನದಲ್ಲಿ, ನ್ಯಾಯಾಲಯಗಳಲ್ಲಿ ಹಾಗೂ ಜನರ ನಡುವೆ, ರಸ್ತೆಗಳಲ್ಲಿ ಹೋರಾಟ ನಡೆಸುತ್ತೇವೆ. ಆ ಮೂಲಕ ನಮ್ಮ ಹಕ್ಕು, ನಮ್ಮ ಸಂಪನ್ಮೂಲ ಹಾಗೂ ನಮ್ಮ ಗುರುತನ್ನು ಉಳಿಸಿಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ಕಳುಹಿಸಬೇಕಿದೆ’ ಎಂದು ಶಿವಕುಮಾರ್ ಗುಡುಗಿದರು.
‘ಪೆರಿಯಾರ್ ಅವರ ಹೋರಾಟ, ಅಣ್ಣಾದುರೈ ಅವರ ನಾಯಕತ್ವ, ಬಸವಣ್ಣನವರ ಕಿಚ್ಚನ್ನು ನಾವು ರೂಢಿಸಿಕೊಳ್ಳಬೇಕು. ನೆನಪಿರಲಿ, ಕರ್ನಾಟಕ ಹಾಗೂ ತಮಿಳುನಾಡು ಒಟ್ಟಾಗಿ ನಿಂತರೆ ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕೇರಳ ಹಾಗೂ ಪಂಜಾಬ್ ತಮ್ಮ ಧ್ವನಿ ಎತ್ತಿದರೆ ಹಿಮಾಲಯವೇ ನಡುಗುತ್ತದೆ. ನಮ್ಮ ಧ್ವನಿ ದುರ್ಬಲಗೊಳಿಸಲು, ನಮ್ಮ ಸಂಪನ್ಮೂಲ ಲೂಟಿ ಮಾಡಲು, ನಮ್ಮ ಸಂಸ್ಕೃತಿ ನಾಸಪಡಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಈ ಜೆಎಸಿ ಸಭೆ ಮೂಲಕ ದೇಶಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ. ನಾವೆಲ್ಲರೂ ಒಟ್ಟಾಗಿ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕಿದೆ. ಈ ದೇಶದಲ್ಲಿ ವೈವಿದ್ಯತೆಯನ್ನು ಸಂಭ್ರಮಿಸಬೇಕು, ಸಮಾನತೆಯನ್ನು ಎತ್ತಿಹಿಡಿಯಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.