ರಾಹುಲ್ ಗಾಂಧಿ
ಪಿಟಿಐ ಚಿತ್ರ
ಲಖನೌ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತ ಹೇಳಿಕೆಗೆ ಸಂಬಂಧಿಸಿ ತಮ್ಮ ವಿರುದ್ಧದ ಪ್ರಕರಣದಲ್ಲಿ ವಿಚಾರಣೆಗೆ ಪದೇಪದೇ ಗೈರಾದ ಕಾರಣಕ್ಕೆ, ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಇಲ್ಲಿನ ನ್ಯಾಯಾಲಯ ₹200 ದಂಡ ವಿಧಿಸಿದೆ.
ದಂಡದ ಹಣವನ್ನು ದೂರುದಾರರ ಪರ ವಕೀಲರಿಗೆ ನೀಡುವಂತೆ, ಇಲ್ಲಿನ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನಿರ್ದೇಶನ ನೀಡಿದ್ದಾರೆ.
ವಿಚಾರಣೆ ವೇಳೆ, ‘ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಿರುವ ಕಾರಣ ನನ್ನ ಕಕ್ಷಿದಾರರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು’ ಎಂದು ರಾಹುಲ್ ಗಾಂಧಿ ಪರ ವಕೀಲರು ಕೋರಿದರು.
ಆಗ, ವಿಚಾರಣೆಯನ್ನು ಏಪ್ರಿಲ್ 14ಕ್ಕೆ ಮುಂದೂಡಿದ ನ್ಯಾಯಾಲಯ, ‘ಮುಂದಿನ ವಿಚಾರಣೆಗೆ ರಾಹುಲ್ ಗಾಂಧಿ ಗೈರಾದಲ್ಲಿ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಎಚ್ಚರಿಸಿತು.
‘2022ರಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಸಾವರ್ಕರ್ ಅವರನ್ನು ‘ಬ್ರಿಟಿಷರ ಸೇವಕ’ ಎಂಬುದಾಗಿ ಕರೆದಿದ್ದರು’ ಎಂದು ದೂರುದಾರರ ಪರ ವಕೀಲ ನೃಪೇಂದ್ರ ಪಾಂಡೆ ತಿಳಿಸಿದ್ದಾರೆ.
‘ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಗೂ ಮುನ್ನ, ಸಾವರ್ಕರ್ ಕುರಿತು ಅವಹೇಳನಕಾರಿ ಮಾಹಿತಿ ಇದ್ದ ಕರಪತ್ರಗಳನ್ನು ಸಹ ಹಂಚಲಾಗಿತ್ತು’ ಎಂದೂ ಪಾಂಡೆ ತಿಳಿಸಿದ್ದಾರೆ.
‘ರೈಲು ಕೂಲಿಗಳ ಸಂಕಷ್ಟ ಸರ್ಕಾರಕ್ಕೆ ಕಾಣಿಸುತ್ತಿಲ್ಲ’
ನವದೆಹಲಿ: ‘ನವದೆಹಲಿ ರೈಲು ನಿಲ್ದಾಣದಲ್ಲಿ ಫೆ. 15ರಂದು ಸಂಭವಿಸಿದ ಕಾಲ್ತುಳಿತ ವೇಳೆ ರೈಲು ಕೂಲಿ ಕಾರ್ಮಿಕರು ತಮ್ಮ ಜೀವ ಪಣಕ್ಕಿಟ್ಟು ಜನರ ರಕ್ಷಣೆಗೆ ಮುಂದಾದರು. ಆದರೆ ಅವರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.
ನವದೆಹಲಿ ರೈಲು ನಿಲ್ದಾಣದಲ್ಲಿ ರೈಲು ಕೂಲಿ ಕಾರ್ಮಿಕರೊಂದಿಗೆ ನಡೆಸಿದ ಸಂವಾದದ ವಿಡಿಯೊವನ್ನು ರಾಹುಲ್ ಗಾಂಧಿ ಅವರು ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ನಿರ್ವಹಣೆಯನ್ನು ಸುಧಾರಿಸುವ ಹಾಗೂ ಭದ್ರತೆಯನ್ನು ಹೆಚ್ಚಿಸುವ ಬಗ್ಗೆ ಸಲಹೆಗಳನ್ನು ನೀಡುವಂತೆ ಜನರಲ್ಲಿ ಮನವಿ ಮಾಡಿರುವ ಅವರು ಕಾಲ್ತುಳಿತದಂತಹ ಅವಘಡಗಳನ್ನು ತಡೆಗಟ್ಟಲು ಸಾಮೂಹಿಕವಾಗಿ ಯೋಚಿಸಬೇಕಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.