ADVERTISEMENT

ಆಫ್ರಿಕಾದಿಂದ ಭಾರತಕ್ಕೆ ಚೀತಾಗಳು; ನಾಯಿಗಳಿಗೆ ರೇಬಿಸ್‌ ನಿರೋಧಕ ಲಸಿಕೆ

ಪಿಟಿಐ
Published 9 ಸೆಪ್ಟೆಂಬರ್ 2022, 13:13 IST
Last Updated 9 ಸೆಪ್ಟೆಂಬರ್ 2022, 13:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್‌, ಮಧ್ಯಪ್ರದೇಶ: ಆಫ್ರಿಕಾದಿಂದ ಚೀತಾಗಳನ್ನು ತರುತ್ತಿರುವ ಕಾರಣ ಇಲ್ಲಿನ ಕುನೊ ರಾಷ್ಟ್ರೀಯ ಉದ್ಯಾನವನ ಸುತ್ತಮುತ್ತಲಿನ 1,000ಕ್ಕೂ ಅಧಿಕ ನಾಯಿಗಳಿಗೆ ರೇಬಿಸ್‌ ನಿರೋಧಕ ಲಸಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತಿ ವೇಗವಾಗಿ ಓಡುವ ಪ್ರಾಣಿಯನ್ನು ಭಾರತದಲ್ಲಿ ಮತ್ತೆ ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಆಫ್ರಿಕಾದಿಂದ ಮುಂದಿನವಾರ ಚೀತಾಗಳನ್ನು ಇಲ್ಲಿಗೆ ತರಲಾಗುತ್ತಿದೆ. ಹೀಗಾಗಿ ಇಲ್ಲಿನ ವನ್ಯಜೀವಿಗಳನ್ನು ರೇಬಿಸ್‌ನಿಂದ ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ಮೋದಿಯಿಂದ ಚಾಲನೆ:ಆಫ್ರಿಕಾದಿಂದ ತಂದ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನದ ಒಳಗೆ ಬಿಡುವ ಮೂಲಕ ಮಹತ್ವಾಕಾಂಕ್ಷೆಯ ಯೋಜನೆಗೆಪ್ರಧಾನಿ ನರೇಂದ್ರ ಮೋದಿ ಅವರುಸೆ.17ರಂದು ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆ.17 ಪ್ರಧಾನಿ ಮೋದಿ ಅವರ ಜನ್ಮದಿನ ಎನ್ನುವುದು ವಿಶೇಷ.

ADVERTISEMENT

ನಮೀಬಿಯಾದಿಂದ 5 ಗಂಡು, 3 ಹೆಣ್ಣು ಚೀತಾಗಳು ಸೆ.17ರಂದುಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತಲುಪುವ ನಿರೀಕ್ಷೆ ಇದೆ. ಇದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಚೀತಾಗಳನ್ನು ಮರು ಪರಿಚಯಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಈ ಮುಂಚೆ ತಿಳಿಸಿದ್ದರು.

ಭಾರತದ ಕೊನೆಯ ಚೀತಾ 1947ರಲ್ಲಿ ಮೃತಪಟ್ಟಿತ್ತು. 1952ರಲ್ಲಿ ಈ ವನ್ಯಜೀವಿಯನ್ನು ವಿನಾಶಗೊಂಡ ಪ್ರಾಣಿಗಳ ಗುಂಪಿಗೆ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.