ವಿಜಯ್ ಶಾ ಮತ್ತು ಕರ್ನಲ್ ಸೋಫಿಯಾ ಖುರೇಷಿ
ಭೋಪಾಲ್: ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಆಡಿದ್ದ ಆಕ್ಷೇಪಾರ್ಹ ಹೇಳಿಕೆ ಕುರಿತ ತನಿಖೆಗೆ ರಾಜ್ಯ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡ ರಚಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಈ ತಂಡ ರಚಿಸಲಾಗಿದೆ. ಐಜಿಪಿ ಪ್ರಮೋದ್ ವರ್ಮಾ, ಡಿಐಜಿ ಕಲ್ಯಾಣ್ ಚಕ್ರವರ್ತಿ ಮತ್ತು ಎಸ್‌ಪಿ ವಾಹಿನಿ ಸಿಂಗ್ ಅವರು ಈ ತಂಡದಲ್ಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಸಚಿವ ವಿಜಯ್ ಶಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್,ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ಎಸ್‌ಐಟಿ ರಚಿಸಬೇಕು ಎಂದೂ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಎಸ್ಐಟಿ ರಚನೆ ಕುರಿತು ಆದೇಶ ಹೊರಡಿಸಿದ್ದಾರೆ.
ತನಿಖಾ ತಂಡವು ಮೇ 28ರ ಒಳಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಸಂಪುಟ ಸಭೆಗೆ ಗೈರು: ಸಚಿವ ವಿಜಯ್ ಶಾ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಗೆ ಹಾಜರಾಗಿರಲಿಲ್ಲ. ಅವರು ಬುಡಕಟ್ಟು ವ್ಯವಹಾರ, ಸಾರ್ವಜನಿಕ ಆಸ್ತಿ ನಿರ್ವಹಣೆ ಸಚಿವರಾಗಿದ್ದಾರೆ.
ಇನ್ನೊಂದೆಡೆ, ಆಕ್ಷೇಪಾರ್ಹ ಹೇಳಿಕೆ ಹಿನ್ನಲೆಯಲ್ಲಿ ವಿಜಯ್ ಶಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಬೇಡಿಕೆಯನ್ನು ರಾಜ್ಯ ಕಾಂಗ್ರೆಸ್ ಘಟಕ ಪುನರುಚ್ಚರಿಸಿದೆ.
ಸೋಫಿಯಾ ಖುರೇಷಿ ಬಗ್ಗೆ ವಿಜಯ್ ಶಾ ಹೇಳಿದ್ದೇನು?
‘ಯಾರು ನಮ್ಮ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದರೊ... ಅವರಿಗೆ ತಕ್ಕ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳುಹಿಸಿದೆವು’ ಎಂದು ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈಚೆಗೆ ಈ ವಿಡಿಯೊವನ್ನು ಭಾರಿ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗುತ್ತಿತ್ತು. ವಿಜಯ್ ಅವರ ವಿರುದ್ಧ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊವನ್ನು ಕಾಂಗ್ರೆಸ್ ಕೂಡ ಹಂಚಿಕೊಂಡಿದ್ದು ತೀವ್ರವಾಗಿ ಟೀಕಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.