ಸಾಂದರ್ಭಿಕ ಚಿತ್ರ
ರೈಸನ್: ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಕಾನ್ವೆಂಟ್ ಶಾಲೆಯೊಂದರ ಪ್ರಾಂಶುಪಾಲರು ಇಸ್ಲಾಂ ಧರ್ಮದ ಪದಗಳ ಉಲ್ಲೇಖವಿರುವ ಹಿಂದಿ ವರ್ಣಮಾಲೆ ಚಾರ್ಟ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಮಧ್ಯಪ್ರದೇಶದಲ್ಲಿ ವಿವಾದ ಭುಗಿಲೆದ್ದಿದ್ದು, ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಬಿ ಕಾನ್ವೆಂಟ್ ಶಾಲೆಯ ಪ್ರಾಂಶುಪಾಲ ಐ.ಎ. ಖುರೇಷಿ ಅವರು ವಿದ್ಯಾರ್ಥಿಗಳಿಗೆ ‘ಕಾ’ ಕಾಬಾ, ‘ಮಾ’ ಮಸೀದಿ ಮತ್ತು ‘ನಾ’ ‘ನಮಾಜ್’ ('Ka' for Kaba, 'Ma' for Masjid and 'Na' for Namaz’ ಎಂಬ ಇಸ್ಲಾಂ ಧರ್ಮದ ಪದಗಳ ಉಲ್ಲೇಖವಿರುವ ಹಿಂದಿ ವರ್ಣಮಾಲೆ ಚಾರ್ಟ್ ಅನ್ನು ವಿತರಿಸಿದ್ದಾರೆ ಎನ್ನಲಾಗಿದೆ.
ಇದೇ ವಿಚಾರವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದ್ದು, ಖುರೇಷಿ ಅವರಿಗೆ ಘೇರಾವ್ ಹಾಕಿದ್ದಾರೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರತಿಭಾ ಶರ್ಮಾ ಹೇಳಿದ್ದಾರೆ.
‘ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಯಾವುದೇ ನಿರ್ದಿಷ್ಟ ನಂಬಿಕೆಯ ಧಾರ್ಮಿಕ ಚಿಹ್ನೆಗಳನ್ನು ಹೊಂದಿರುವ ಅಧ್ಯಯನ ಸಾಮಗ್ರಿಗಳನ್ನು ಶಾಲೆಗಳಲ್ಲಿ ವಿತರಿಸುವುದಾಗಲಿ ಅಧವಾ ಕಲಿಸುವುದಾಗಲಿ ಮಾಡುವಂತಿಲ್ಲ. ಖುರೇಷಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಡಿ.ಡಿ. ರಜಕ್ ಹೇಳಿದ್ದಾರೆ.
‘ಅಜಾಗರೂಕತೆಯಿಂದಾಗಿ ಉರ್ದು-ಹಿಂದಿ ಮಿಶ್ರಿತ ಗುಣಾಕಾರ ಕೋಷ್ಟಕಗಳನ್ನು ಹೊಂದಿರುವ ಒಂದೆರಡು ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿವೆ’ ಎಂದು ಪ್ರಾಂಶುಪಾಲ ಖುರೇಷಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ವರ್ಣಮಾಲೆ ಚಾರ್ಟ್‌ಗಳನ್ನು ಭೋಪಾಲ್‌ನಿಂದ ತರಲಾಗಿದೆ. ಮಾರಾಟಗಾರರ ತಪ್ಪಿನಿಂದಾಗಿ ಮದರಸಾಗಳಲ್ಲಿ ಸಾಮಾನ್ಯವಾಗಿ ಬಳಸುವ ಮೂರರಿಂದ ನಾಲ್ಕು ಪದಗಳು ಸೇರಿಸಲಾಗಿದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.