ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿರುವ ಕಾರ್ಮಿಕರು
–ಪಿಟಿಐ ಚಿತ್ರ
ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಸುಮಾರು 15,000 ಪೌರ ಕಾರ್ಮಿಕರು ಸೋಮವಾರ ನಾಲ್ಕು ವಲಯಗಳಲ್ಲಿ ಏಕಕಾಲದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
ಪ್ರಯಾಗರಾಜ್ ಮೇಯರ್ ಗಣೇಶ್ ಕೇಸರವಾಣಿ, ಮಹಾಕುಂಭದ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಆಕಾಂಕ್ಷಾ ರಾಣಾ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮೇಲ್ವಿಚಾರಣಾ ತಂಡದವರು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದರು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಮುಖ್ಯ ಮೇಲ್ವಿಚಾರಕ ಮತ್ತು ಜಡ್ಜ್ ರಿಷಿ ನಾಥ್ ಅವರು ತಮ್ಮ ತಂಡದೊಂದಿಗೆ ಲಂಡನ್‌ನಿಂದ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಿಸ್ಟ್‌ಬ್ಯಾಂಡ್‌ನಲ್ಲಿರುವ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೈರ್ಮಲ್ಯ ಕಾರ್ಮಿಕರ ತಲೆ ಎಣಿಕೆ ಮಾಡಲಾಗಿದೆ. ದಾಖಲೆಯ ಅಂತಿಮ ಮೌಲ್ಯಾಂಕನ ವರದಿಯನ್ನು ಮೂರು ದಿನಗಳ ನಂತರ ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತ ಹೇಳಿಕೆ ನೀಡಲಾಗಿದೆ.
2019ರ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ 10,000 ಪೌರ ಕಾರ್ಮಿಕರು ಏಕಕಾಲದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು.
ವಿಶ್ವ ದಾಖಲೆಯ ಪ್ರಯತ್ನವು ಪವಿತ್ರ ಭೂಮಿ ಪ್ರಯಾಗ್‌ರಾಜ್‌ನಿಂದ ಜಗತ್ತಿಗೆ ಸ್ವಚ್ಛತೆಯ ಪ್ರಬಲ ಸಂದೇಶವನ್ನು ರವಾನಿಸಿದೆ ಎಂದು ಪ್ರಯಾಗರಾಜ್ ಮೇಯರ್ ಕೇಸರವಾಣಿ ಹೇಳಿದ್ದಾರೆ.
ಮಹಾಕುಂಭವು ವಿಶ್ವದ ಅತಿದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಪೌರ ಕಾರ್ಮಿಕರು ಕುಂಭಮೇಳದ ಪ್ರದೇಶವನ್ನು ಸ್ವಚ್ಛವಾಗಿಡಲು ಹಗಲಿರುಳು ಶ್ರಮಿಸಿದ್ದಾರೆ. ಅವರೇ ಕಾರ್ಯಕ್ರಮದ ಯಶಸ್ಸಿನ ನಿಜವಾದ ವೀರರು ಎಂದು ಉತ್ತರ ಪ್ರದೇಶದ ನಗರಾಭಿವೃದ್ಧಿ ಮತ್ತು ಇಂಧನ ಸಚಿವ ಎ.ಕೆ.ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.