ಮಹಾಕುಂಭ ಮೇಳದಲ್ಲಿ ಕಾಲ್ತುಳಿತ
(ರಾಯಿಟರ್ಸ್ ಚಿತ್ರ)
ಲಖನೌ: ಮಹಾಕುಂಭ ಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತದ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ರಚಿಸಿರುವ ತ್ರಿಸದಸ್ಯ ನ್ಯಾಯಾಂಗ ಆಯೋಗವು ನಾಳೆ (ಜ.31) ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಸಮಿತಿಯ ಮುಖ್ಯಸ್ಥರೂ ಆಗಿರುವ ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹರ್ಷ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ತನಿಖೆಯನ್ನು ಪೂರ್ಣಗೊಳಿಸಲು ಆಯೋಗಕ್ಕೆ ಒಂದು ತಿಂಗಳ ಸಮಯವಿದೆ. ಆದಾಗ್ಯೂ ಶೀಘ್ರವಾಗಿ ತನಿಖೆಯನ್ನು ಪೂರ್ಣಗೊಳಿಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ತನಿಖೆಯನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುವುದು. ಹಾಗಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ನಾವು ಅಧಿಕಾರ ವಹಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಸಮಿತಿಯ ಮೂವರು ಸದಸ್ಯರು ಪ್ರತ್ಯೇಕ ಅಂಶಗಳ ಕುರಿತು ತನಿಖೆ ನಡೆಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹರ್ಷ ಕುಮಾರ್, ಮೊದಲು ನಮ್ಮ ನಡುವೆ ಚರ್ಚಿಸುತ್ತೇವೆ. ಈಗ ವಿವರವಾಗಿ ಹೇಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ತನಿಖೆಯ ಕುರಿತು ಮಾತನಾಡಿದ ಅವರು, ಪರಿಶೀಲನೆ ನಡೆಸಲು ನಾಳೆ ( ಶುಕ್ರವಾರ), ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇವೆ. ಘಟನೆಗೆ ಸಂಭವನೀಯ ಕಾರಣಗಳು ಮತ್ತು ಸಂದರ್ಭಗಳ ಕುರಿತು ವಿಶ್ಲೇಷಿಸುತ್ತೇವೆ ಎಂದಿದ್ದಾರೆ.
ಮೊದಲು, ನಾವು ಕಾರಣಗಳನ್ನು ಪರಿಶೀಲಿಸಬೇಕು. ಮೂಲ ಕಾರಣ ಹುಡುಕಿದಾಗ ಉತ್ತರ ಸಿಗಲಿದೆ. ಮೊದಲು ನಾವು ಕಾರಣಗಳನ್ನು ಹುಡುಕುವತ್ತ ಗಮನ ಹರಿಸುತ್ತೇವೆ. ಅಲ್ಲದೇ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುಲು ಸೂಕ್ತ ಕ್ರಮಗಳ ಬಗ್ಗೆಯೂ ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದ್ದಾರೆ.
ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮಹಿಳೆಯರು ಸೇರಿ ಕನಿಷ್ಠ 30 ಮಂದಿ ಮೃತಪಟ್ಟಿದ್ದು, 60 ಜನ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬುಧವಾರ ಆದೇಶಿಸಿದ್ದರು.
ನಿವೃತ್ತ ನ್ಯಾಯಮೂರ್ತಿ ಹರ್ಷ ಕುಮಾರ್ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವಿ.ಕೆ ಗುಪ್ತಾ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಿ.ಕೆ ಸಿಂಗ್ ಸಮಿತಿಯ ಇನ್ನಿಬ್ಬರು ಸದಸ್ಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.