ADVERTISEMENT

ಮಹಾ ಕುಂಭಮೇಳ ಕಾಲ್ತುಳಿತ: 3 ಕಿ.ಮೀ ದೂರದಲ್ಲಿ ಮತ್ತೊಂದು ಕಾಲ್ತುಳಿತ; 7 ಸಾವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 6:55 IST
Last Updated 31 ಜನವರಿ 2025, 6:55 IST
   

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಮಹಾಕುಂಭಮೇಳದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಘಟನಾ ಸ್ಥಳದಿಂದ 3 ಕಿ.ಮೀ ದೂರದಲ್ಲಿ ಸಂಭವಿಸಿದ ಮತ್ತೊಂದು ಕಾಲ್ತುಳಿತದಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ.

ಸಂಗಮದಿಂದ 3 ಕಿ.ಮೀ ದೂರದಲ್ಲಿರುವ ಜೂಸಿ ಘಾಟ್‌ನಲ್ಲಿ ಈ ಕಾಲ್ತುಳಿತ ಸಂಭವಿಸಿದೆ ಎಂದು ಕಲ್ಪವಾಸಿ ಪೊಲೀಸ್ ಠಾಣೆಯ ವೃತ್ತಾಧಿಕಾರಿ ರುದ್ರ ಕುಮಾರ್ ಸಿಂಗ್ ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

‘ಜನಸಂದಣಿಯ ಅತಿಯಾದ ಒತ್ತಡದಿಂದಾಗಿ ಜೂಸಿಯಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿ ಹೇಳಿದರು.

ADVERTISEMENT

ಬುಧವಾರ ಸಂಜೆ 7 ಗಂಟೆಗೆ ಮಹಾಕುಂಭನಗರದ ಜಿಲ್ಲಾಧಿಕಾರಿ ವಿಜಯ್ ಕಿರಣ್ ಆನಂದ್ ಮತ್ತು ಮೇಳದ ಡಿಐಜಿ ವೈಭವ್ ಕೃಷ್ಣ ಅವರು ಮೊದಲ ಕಾಲ್ತುಳಿತದ ಕುರಿತು ಮಾಹಿತಿ ನೀಡಿದ್ದರು. ಈ ವೇಳೆ ಬುಧವಾರ ನಸುಕಿನ 1 ಗಂಟೆಯಿಂದ 2 ಗಂಟೆಯ ನಡುವೆ ಸಂಗಮದ ಬಳಿ ನೂಕುನುಗ್ಗಲು ಉಂಟಾಗಿ 30 ಮಂದಿ ಸಾವಿಗೀಡಾಗಿರುವುದಾಗಿ ಹೇಳಿದ್ದರು.

ಕಾಲ್ತುಳಿತದ ನಂತರ, ಉತ್ತರ ಪ್ರದೇಶದ ಸರ್ಕಾರವು ಸುರಕ್ಷತಾ ಕ್ರಮಗಳ ಭಾಗವಾಗಿ ವಿವಿಐಪಿ ಪಾಸ್‌ಗಳು ಮತ್ತು ವಾಹನಗಳ ಪ್ರವೇಶವನ್ನು ರದ್ದುಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.