ADVERTISEMENT

ಕೃಷಿ ಸಾಲ ಮನ್ನಾ: ಚುನಾವಣಾ ಘೋಷಣೆ ಈಡೇರಿಸಲು ಬದ್ಧ ಎಂದ DCM ಏಕನಾಥ ಶಿಂದೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 11:33 IST
Last Updated 29 ಮಾರ್ಚ್ 2025, 11:33 IST
ಏಕನಾಥ ಶಿಂದೆ –ಪಿಟಿಐ ಚಿತ್ರ
ಏಕನಾಥ ಶಿಂದೆ –ಪಿಟಿಐ ಚಿತ್ರ   

ಪುಣೆ: ಕೃಷಿ ಸಾಲ ಮನ್ನಾ ಸೇರಿದಂತೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಘೋಷಿಸಲಾದ ಭರವಸೆಗಳನ್ನು ಈಡೇರಿಸಲು ಮಹಾರಾಷ್ಟ್ರ ಮಹಾಯುತಿ ಸರ್ಕಾರ ಬದ್ಧ ಎಂದು ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಶನಿವಾರ ಹೇಳಿದ್ದಾರೆ.

ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಹೇಳಿಕೆ ನೀಡಿ, ‘ರೈತರು ಸಾಲ ಮನ್ನಾಕ್ಕಾಗಿ ಕಾಯುವ ಬದಲು ಸಕಾಲದಲ್ಲಿ ಸಾಲ ಮರುಪಾವತಿಗೆ ಮುಂದಾಗಬೇಕು’ ಎಂದಿದ್ದರು. ಇದರ ಬೆನ್ನಲ್ಲೇ ಶಿಂದೆ ಈ ಹೇಳಿಕೆ ನೀಡಿದ್ದಾರೆ.

‘ಕಲ್ಯಾಣ ಕಾರ್ಯಕ್ರಮಗಳಿಗೆ, ಅಭಿವೃದ್ಧಿ ಮತ್ತು ನೌಕರರ ಸಂಬಳಕ್ಕೆ ಅಗತ್ಯವಿರುವಷ್ಟು ಹಣವನ್ನು ರಾಜ್ಯದ ಬೊಕ್ಕಸದಲ್ಲಿರುವಂತೆ ನೋಡಿಕೊಳ್ಳಬೇಕು. ಜತೆಗೆ ರಾಜ್ಯದ ಆರ್ಥಿಕತೆಯಲ್ಲಿ ಸಮತೋಲನ ಇರುವಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ.

ADVERTISEMENT

ಮಹಿಳೆಯರಿಗೆ ಮಾಸಿಕ ನೀಡುವ ‘ಲಡ್ಕಿ ಬಹಿನ್ ಯೋಜನಾ’ಗಾಗಿ ನೀಡಲಾಗುತ್ತಿದ್ದ ನೆರವನ್ನು ₹1,500ರಿಂದ ₹2 ಸಾವಿರಕ್ಕೆ ಹೆಚ್ಚಿಸಲಾಗುವುದು. ಚುನಾವಣೆ ಸಂದರ್ಭದಲ್ಲಿ ಮಾಡಿದ ಪ್ರತಿಯೊಂದು ವಾಗ್ದಾನಗಳನ್ನೂ ಈಡೇರಿಸಲಾಗುವುದು. ಪ್ರಣಾಳಿಕೆಯಲ್ಲಿ ಹೇಳಿರುವುದು ಎಲ್ಲವೂ ಸತ್ಯವೇ ಹೊರತು, ಯಾವುದೂ ಮುದ್ರಣ ದೋಷವಲ್ಲ’ ಎಂದಿದ್ದಾರೆ.

‘ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಅಕಾಲಿಕ ಮಳೆಯಿಂದ ಉಂಟಾದ ಬೆಳೆ ನಷ್ಟ ಪರಿಹಾರವಾಗಿ ₹16 ಸಾವಿರ ಕೋಟಿ ನೀಡಲಾಗಿದೆ. ಕೃಷಿ ವ್ಯವಹಾರಗಳಿಗೆ ಮತ್ತು ಬೆಳೆ ವಿಮೆ ಯೋಜನೆಗಾಗಿ ₹45 ಸಾವಿರ ಕೋಟಿ ಮೀಸಲಿಡಲಾಗಿದೆ. ನಮ್ಮ ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಿಸಿದಲ್ಲಿ ಸೋದರಿಯರಿಗೆ ನೀಡುವ ನೆರವನ್ನು ₹2,100ಕ್ಕೆ ಹೆಚ್ಚಿಸಲಾಗುವುದು’ ಎಂದು ಶಿಂದೆ ಭರವಸೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮುಸಲ್ಮಾನರಿಗೆ ನೀಡುವುದಾಗಿ ಘೋಷಿಸಿರುವ ‘ಸೌಗತ್‌ ಎ ಮೋದಿ’ ಯೋಜನೆಯ ಕಿಟ್‌ಗಳ ಕುರಿತ ಪ್ರಶ್ನೆಗೆ ಉತ್ತರಿಸಿರುವ ಶಿಂದೆ, ‘ದೇಶದಲ್ಲಿರುವ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸುತ್ತಿರುವ ಕೇಂದ್ರ ಸರ್ಕಾರವು, 35 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ತಂದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.