ADVERTISEMENT

ಮಹಾರಾಷ್ಟ್ರ: ಬೇಕರಿ ಕೇಕ್ ಬದಲು ತಾಜಾ ಹಣ್ಣಿನ ಕೇಕ್‌; ಬೆಳೆಗಾರರ ವಿನೂತನ ಆಂದೋಲನ

ಪಿಟಿಐ
Published 18 ಮಾರ್ಚ್ 2021, 6:13 IST
Last Updated 18 ಮಾರ್ಚ್ 2021, 6:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿರುವ ಕೆಲವು ಹಣ್ಣು ಬೆಳೆಗಾರರು, ಉತ್ತಮ ಆರೋಗ್ಯಕ್ಕಾಗಿ ಜನ್ಮದಿನ ಮತ್ತು ವಿಶೇಷ ಸಂದರ್ಭಗಳಲ್ಲಿ ಬೇಕರಿ ಕೇಕ್‌ ಬದಲಿಗೆ ‘ತಾಜಾ ಹಣ್ಣಿನ ಕೇಕ್‌‘ ಬಳಸುವಂತಹ ‘ವಿನೂತನ ಆಂದೋಲನ‘ವನ್ನು ಆರಂಭಿಸಿದ್ದಾರೆ.

ತಾವೇ ತಾಜಾ ಹಣ್ಣಿನ ಕೇಕ್‌ಗಳನ್ನು ತಯಾರಿಸಿ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯಗೊಳಿಸಿ, ಹೆಚ್ಚು ಜನರನ್ನು ಆಕರ್ಷಿಸುತ್ತಿದ್ದಾರೆ. ರೈತರು ಮತ್ತು ರೈತ ಕುಟುಂಬದವರಿಗಷ್ಟೇ ಸೀಮಿತಗೊಳಿಸಿರುವ ಈ ಆಂದೋಲನ ಮುಂದೊಂದು ದಿನ ಹಣ್ಣು ಬೆಳೆಗಾರರಿಗೆ ತಾವು ಬೆಳೆದ ಹಣ್ಣುಗಳ ಮಾರಾಟಕ್ಕೆ ಸುಸ್ಥಿರ ಪರಿಹಾರ ನೀಡುವ ಸಾಧ್ಯತೆ ಇದೆ ಎಂದು ತಜ್ಞರು ಆಶಿಸಿದ್ದಾರೆ.

ಕೃಷಿಕರು ಮತ್ತು ಕೃಷಿ ತಜ್ಞರ ಪ್ರಕಾರ, ‘ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ಈ ವಿನೂತನ ಆಂದೋಲನದ ಉದ್ದೇಶ, ‘ಕೋವಿಡ್‌ 19‘ ಸಾಂಕ್ರಾಮಿಕದ ಅವಧಿಯಲ್ಲಿ ಹಣ್ಣು ಬೆಳೆಗಾರರಿಗೆ, ತಾವು ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲು ಹೊಸ ದಾರಿ ತೋರುವುದು. ಜತೆಗೆ, ರೈತರು ಮತ್ತು ಅವರ ಕುಟುಂಬದವರು ತಮ್ಮ ನಿತ್ಯದ ಆಹಾರದಲ್ಲಿ ಹೆಚ್ಚು ಹಣ್ಣುಗಳನ್ನು ಸೇವಿಸುವಂತೆ ಮಾಡುವುದು‘.

ADVERTISEMENT

ಈ ಆಂದೋಲನದ ಭಾಗವಾಗಿ, ರೈತರು ಮತ್ತು ಅವರ ಕುಟುಂಬದವರು ಮತ್ತು ವಿವಿಧ ಹಣ್ಣು ಬೆಳೆಗಾರರ ಸಂಘಗಳು, ಸ್ಥಳೀಯವಾಗಿ ಸಿಗುವ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಕಿತ್ತಳೆ, ಅನಾನಸ್‌ ಮತ್ತು ಬಾಳೆ ಹಣ್ಣನ್ನು ಬಳಸಿ ‘ತಾಜಾ ಹಣ್ಣಿನ ಕೇಕ್‌‘ ತಯಾರಿಸಿ ಬಳಸುವುದನ್ನು ಉತ್ತೇಜಿಸುತ್ತಿದ್ದಾರೆ.

‘ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಹಣ್ಣಿನ ಉತ್ಪಾದನೆ ಹೆಚ್ಚಾಗಿದೆ. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ. ಬೆಲೆಯೂ ಕಡಿಮೆಯಾಗಿದೆ. ವ್ಯಾಪಾರಸ್ಥರು ಬಹಳ ಕಡಿಮೆ ಬೆಲೆಗೆ ಹಣ್ಣುಗಳ ಖರೀದಿಗೆ ಕೇಳುತ್ತಿದ್ದಾರೆ. ಈಗಾಗಲೇ ಕೊರೊನಾ – ಲಾಕ್‌ಡೌನ್ ಕಾರಣದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಬೇಡಿಕೆ–ಬೆಲೆ ವ್ಯತ್ಯಾಸದಿಂದಾಗಿ ಬೆಳೆಗಾರರು ಮತ್ತಷ್ಟು ಹೈರಾಣಾಗಿದ್ದಾರೆ. ಇಂಥ ಸಂಕಷ್ಟಕ್ಕೆ ಪರಿಹಾರವಾಗಿ ರೈತರು ಈ ವಿನೂತನ ಆಂದೋಲನವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಾರಂಭಿಸಿದ್ದಾರೆ‘ ಎಂದು ಪುಣೆ ಮೂಲದ ಕೃಷಿ ವಿಶ್ಲೇಷಕ ದೀಪಕ್ ಚವಾಣ್ ಹೇಳಿದರು.

‘ಸಾಮಾನ್ಯವಾಗಿ, ಹಣ್ಣು ಬೆಳೆಗಾರರು ಮತ್ತು ಅವರ ಕುಟುಂಬದವರು ತಮ್ಮ ನಿತ್ಯದ ಆಹಾರದ ಭಾಗವಾಗಿ ಹಣ್ಣು ಗಳನ್ನು ಸೇವಿಸುವುದು ಕಡಿಮೆ. ಈ ಆಂದೋಲನದಿಂದಾಗಿ ರೈತರು ಮತ್ತು ಅವರ ಕುಟುಂಬಗಳು ವಿವಿಧ ಸಂದರ್ಭದಲ್ಲಿ ತಾಜಾ ಹಣ್ಣಿನ ಕೇಕ್ ರೂಪದಲ್ಲಿ ಹಣ್ಣುಗಳನ್ನು ಸೇವಿಸುತ್ತಿದ್ದಾರೆ. ಕಡಿಮೆ ಪೌಷ್ಟಿಕಾಂಶವಿರುವ ಬೇಕರಿಯ ತಿನಿಸುಗಳಿಗಿಂತ, ಈ ಹಣ್ಣಿನ ಕೇಕ್‌ಗಳ ಸೇವನೆ ಆರೋಗ್ಯಕ್ಕೆ ಪೂರಕವಾಗಿದೆ. ಈ ಮೂಲಕ ಆಂದೋಲನದ ಉದ್ದೇಶವೂ ಈಡೇರಿದಂತಾಗಿದೆ‘ ಎಂದು ಚವಾಣ್ ಹೇಳಿದರು.

ರೈತ ಸಂಘಟನೆಯಾದ ‘ಹೋಯ್ ಅಮ್ಹಿ ಶೆಟ್ಕಾರಿ‘, ಸಾಮಾಜಿಕ ಜಾಲತಾಣದಲ್ಲಿ ತಾಜಾ ಹಣ್ಣುಗಳ ಕೇಕ್‌ ತಯಾರಿಸುವ ಸ್ಪರ್ಧೆಯನ್ನು ನಡೆಸುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದವರು ಸ್ಥಳೀಯ ಲಭ್ಯ ಹಣ್ಣುಗಳನ್ನು ಬಳಸಿ ಕೇಕ್‌ ತಯಾರಿಸ ಬೇಕು. ‘ತಾಜಾ ಹಣ್ಣಿನ ಕೇಕ್ ಆಂದೋಲನದ ಕಾವು ಏರಿಕೆಯಾಗುತ್ತಿದ್ದು, ಈಗ ನಾವು ಸ್ಪರ್ಧಿಗಳಿಂದ ತಾಜಾ ಹಣ್ಣಿನಿಂದ ತಯಾರಿಸಿದ ಕೇಕ್‌ನ ಫೋಟೊ, ವಿಡಿಯೊಗಳನ್ನು ಆಹ್ವಾನಿಸಿದ್ದೇವೆ‘ ಎಂದು ಸಾಂಗ್ಲಿ ಮೂಲದ ರೈತ ಹಾಗೂ ಶೆಟ್ಕಾರಿ ರೈತ ಗುಂಪಿನ ಸದಸ್ಯ ಅಮೋಲ್ ಪಾಟೀಲ್ ಹೇಳಿದರು.

‘ಇಲ್ಲಿವರೆಗೆ 150 ಸ್ಪರ್ಧಿಗಳು ತಾಜಾ ಹಣ್ಣಿನ ಕೇಕ್‌ನ ಫೋಟೊ ಮತ್ತು ವಿಡಿಯೊಗಳನ್ನು ಕಳುಹಿಸಿದ್ದಾರೆ‘ ಎಂದು ಪಾಟೀಲ್ ಹೇಳಿದರು. ರೈತರು ಮತ್ತು ಅವರ ಕುಟುಂಬಗಳು, ಇತರರು ಸ್ಪರ್ಧೆಗಾಗಿ ಕಳುಹಿಸಿದ ತಾಜಾ ಹಣ್ಣಿನ ಕೇಕ್ ಫೋಟೊಗಳನ್ನು, ಶೆಟ್ಕಾರಿ ಸಂಸ್ಥೆಯ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವುದಾಗಿ ಪಾಟೀಲ್ ತಿಳಿಸಿದರು.

‘ಹೊಸ ರೂಪದಲ್ಲಿರುವ ಈ ಆಂದೋಲನವನ್ನು ಮುಂದೆ ತೆಗೆದುಕೊಂಡು ಹೋಗಲು, ಇನ್ನೊಂದಿಷ್ಟು ಪ್ರಯತ್ನ, ಬೆಂಬಲ ಅಗತ್ಯವಿದೆ. ಇದಕ್ಕೆ ವಾಣಿಜ್ಯ ಸ್ಪರ್ಶ ನೀಡಬೇಕಿದೆ‘ ಎಂದು ಪಾಟೀಲ್ ಅಭಿಪ್ರಾಯಪಟ್ಟರು.

ಈ ಆಂದೋಲನವನ್ನು ಮತ್ತೊಂದು ಹಂತದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿರುವ ಅಮರಾವತಿಯ ‘ಭಜಿ ಬಜಾರ್‌‘ನ ಮಾಲೀಕ ಮಹೇಂದ್ರ ತೆಕಾಡೆ, ‘ಈ ಆಂದೋಲನದತ್ತ ಮಕ್ಕಳನ್ನು ಆಕರ್ಷಿಸಲು ಹಣ್ಣುಗಳಿಂದ ಮಿಕ್ಕಿ ಮೌಸ್, ಬಾರ್ಬಿ ಗೊಂಬೆ ಮತ್ತಿತರ ಅತ್ಯಾಕರ್ಷಕ ವಿನ್ಯಾಸಗಳನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.