ರಾಹುಲ್ ಗಾಂಧಿ
ಪಿಟಿಐ ಚಿತ್ರ
ಪಟ್ನಾ: ಮಹಾರಾಷ್ಟ್ರದಲ್ಲಿ 2024ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗೆ ಅನುಕೂಲವಾಗುವಂತೆ ಅಕ್ರಮವೆಸಗಲಾಯಿತು. ಬಿಹಾರದಲ್ಲಿಯೂ ಅದೇ ತಂತ್ರವನ್ನು ಪುನರಾವರ್ತಿಸಲು ಕೇಂದ್ರದ ಎನ್‌ಡಿಎ ಸರ್ಕಾರ ಬಯಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ತರಾತರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿರುವುದನ್ನು ವಿರೋಧಿಸಿ ಇಂಡಿಯಾ ಬಣ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿರುವ ರಾಹುಲ್, 'ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಪರವಾಗಿ ಅಕ್ರಮಗಳನ್ನೆಸಗಲಾಗಿದೆ. ಅವರು (ಎನ್‌ಡಿಎ) ಬಿಹಾರದಲ್ಲೂ ಅದನ್ನೇ ಪುನರಾವರ್ತಿಸಲು ಬಯಸುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ' ಎಂದಿದ್ದಾರೆ.
'ಚುನಾವಣಾ ಆಯೋಗವು ಸಂವಿಧಾನವನ್ನು ರಕ್ಷಿಸಬೇಕು. ಅದು, ಬಿಜೆಪಿ ಸೂಚನೆಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಬಿಜೆಪಿ ನಾಮನಿರ್ದೇಶನ ಮಾಡಿದವರೇ ಅದರ ಆಯುಕ್ತರಾಗಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು ಚುನಾವಣಾ ಫಲಿತಾಂಶವನ್ನು ಕದಿಯುವ ಪ್ರಯತ್ನವಾಗಿದೆ. ನಾಗರಿಕರ ಹಕ್ಕುಗಳನ್ನು ಅದಲ್ಲೂ, ಯುವಕರ ಹಕ್ಕುಗಳನ್ನು ಕಸಿಯಲು ಚುನಾವಣಾ ಆಯೋಗಕ್ಕೆ ನಾವು ಬಿಡುವುದಿಲ್ಲ' ಎಂದು ಚಾಟಿ ಬೀಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್, ಇಂದು (ಬುಧವಾರ ಜುಲೈ 9) ಬೆಳಿಗ್ಗೆ ಪಟ್ನಾ ತಲುಪಿದರು.
ಪಟ್ನಾದಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಿಂದ ಚುನಾವಣಾ ಆಯೋಗದ ಕಚೇರಿ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ(ಎಂಎಲ್) ನಾಯಕ ದೀಪಂಕರ್ ಭಟ್ಟಾಚಾರ್ಯ, ಸಿಪಿಐ ನಾಯಕ ಡಿ. ರಾಜಾ ಹಾಗೂ ಇತರ ಪಕ್ಷಗಳ ನಾಯಕರೊಂದಿಗೆ ರಾಹುಲ್ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.