ADVERTISEMENT

ಕರ್ನಾಟಕದ ಸಣ್ಣ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚು

ಕೇಂದ್ರ ಆರೋಗ್ಯ ಸಚಿವಾಲಯದಿಂದ ವರದಿ

ಕಲ್ಯಾಣ್‌ ರೇ
Published 9 ಅಕ್ಟೋಬರ್ 2019, 20:15 IST
Last Updated 9 ಅಕ್ಟೋಬರ್ 2019, 20:15 IST
.
.   

ನವದೆಹಲಿ: ಕರ್ನಾಟಕದಲ್ಲಿ ಸಣ್ಣ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶವುಳ್ಳಆಹಾರ ದೊರೆಯುತ್ತಿಲ್ಲ ಎಂದು ಭಾರತದ ಅತಿ ದೊಡ್ಡ ಪೌಷ್ಟಿಕಾಂಶ ಸಮೀಕ್ಷೆಯ ವರದಿ ಹೇಳಿದೆ.

ಎರಡು ವರ್ಷದೊಳಗಿನ ಹತ್ತರಲ್ಲಿ ಒಂದು ಮಗುವಿಗೆ ಮಾತ್ರ (ಶೇ 10ರಷ್ಟು) ಅಗತ್ಯ ದ್ವಿದಳ ಧಾನ್ಯಗಳು ಸಿಗುತ್ತಿವೆ. ಐದರಲ್ಲಿ ಒಂದು ಮಗುವಿಗೆ ಮಾತ್ರ ಮೊಟ್ಟೆ, ಮಾಂಸ ದೊರೆಯುತ್ತಿದೆ.

ಎರಡರಿಂದ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಧಾನ್ಯ, ಗೆಡ್ಡೆ–ಗೆಣಸುಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿವೆ. ಆದರೆ, ಹಾಲು, ಮೊಸರು ಮತ್ತು ಹಾಲಿನ ಇತರ ಉತ್ಪನ್ನಗಳು ಸಿಗುವುದು ಶೇ 50ರಷ್ಟು ಮಕ್ಕಳಿಗೆ ಮಾತ್ರ. ಇನ್ನೂ ಕಡಿಮೆ ಸಂಖ್ಯೆಯ ಮಕ್ಕಳಿಗೆ ಮಾತ್ರ ಮಾಂಸ ಮತ್ತು ಮೊಟ್ಟೆ ತಿನ್ನುವ ಭಾಗ್ಯ ಇದೆ.

ADVERTISEMENT

5–9 ವರ್ಷ ವಯಸ್ಸಿನ ಮಕ್ಕಳ‍ಪರಿಸ್ಥಿತಿ ಸ್ವಲ್ಪ ಉತ್ತಮ. ಆದರೆ, ಈ ವಯೋಮಾನದ ಮಕ್ಕಳಿಗೆ ಪ್ರಾಣಿಜನ್ಯ ಪ್ರೊಟೀನ್‌ ಸಿಗುತ್ತಿಲ್ಲ. ಶೇ 21ರಷ್ಟು ಮಕ್ಕಳಿಗೆ ಮೀನು, ಶೇ 41ರಷ್ಟು ಮಕ್ಕಳಿಗೆ ಕೋಳಿ ಮಾಂಸ ಮತ್ತು ಶೇ 57ರಷ್ಟು ಮಕ್ಕಳಿಗೆ ಮೊಟ್ಟೆ ತಿನ್ನುವ ಅವಕಾಶ ಸಿಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಸಮಗ್ರ ರಾಷ್ಟ್ರೀಯ ಪೌಷ್ಟಿಕತೆ ಸಮೀಕ್ಷೆ ಹೇಳಿದೆ.

ಭಾರತವು ತನ್ನ ಸಾಮರ್ಥ್ಯಕ್ಕೆ ತಕ್ಕಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲು ಅಪೌಷ್ಟಿಕತೆಯೇ ದೊಡ್ಡ ಸವಾಲು ಎಂದು ಈ ಸಮೀಕ್ಷೆ ಗುರುತಿಸಿದೆ.

ಸಾಕಷ್ಟು ಪೌಷ್ಟಿಕತೆಯುಳ್ಳ ಆಹಾರ ದೇಹಕ್ಕೆ ಸಿಗಬೇಕಿದ್ದರೆ ಆಹಾರದಲ್ಲಿ ವೈವಿಧ್ಯ ಮುಖ್ಯ. ಆಹಾರದಲ್ಲಿ ವೈವಿಧ್ಯ ಇಲ್ಲದಿದ್ದರೆ ಮತ್ತು ಸಾಕಷ್ಟು ಬಾರಿ ಆಹಾರ ಸೇವನೆ ಸಾಧ್ಯವಾಗದಿದ್ದರೆ ಅಪೌಷ್ಟಿಕತೆ ಉಂಟಾಗುತ್ತದೆ. ಇದು ಮಕ್ಕಳ ಸಾವಿಗೂ ಕಾರಣವಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಶಾಲೆಗೆ ಹೋಗುವ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದ ಶೇ 85ಕ್ಕೂ ಹೆಚ್ಚಿನವರಿಗೆ ಸೊಪ್ಪು–ತರಕಾರಿ, ಧಾನ್ಯಗಳು ಕನಿಷ್ಠ ವಾರಕ್ಕೆ ಒಮ್ಮೆಯಾದರೂ ದೊರೆಯುತ್ತವೆ. ಆದರೆ, ಮೂರನೇ ಒಂದರಷ್ಟು ಮಕ್ಕಳಿಗೆ ಮಾತ್ರ ಮೊಟ್ಟೆ, ಮೀನು, ಕೋಳಿ ಮಾಂಸ ಅಥವಾ ಇತರ ಮಾಂಸ ವಾರಕ್ಕೊಮ್ಮೆ ಲಭ್ಯ. ಶೇ 60ರಷ್ಟು ಮಕ್ಕಳಿಗೆ ಹಾಲು ಅಥವಾ ಹಾಲಿನ ಉತ್ಪನ್ನ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.