ದೆಹಲಿಯ ‘ವೀರ ಭೂಮಿ’ಯಲ್ಲಿರುವ ರಾಜೀವ್ ಗಾಂಧಿ ಅವರ ಸಮಾಧಿಗೆ ರಾಹುಲ್ ಗಾಂಧಿ ಪುಷ್ಪ ನಮನ ಸಲ್ಲಿಸಿದರು
ನವದೆಹಲಿ: ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 34ನೇ ಪುಣ್ಯತಿಥಿ. ಈ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ದೆಹಲಿಯ ‘ವೀರ ಭೂಮಿ’ಯಲ್ಲಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಪಿ. ಚಿದಂಬರಂ, ಸಚಿನ್ ಪೈಲೆಟ್ ಸೇರಿದಂತೆ ಅನೇಕರು ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇಂದಿರಾ ಗಾಂಧಿ ಹತ್ಯೆ ಬಳಿಕ ದೇಶದ ಪ್ರಧಾನಿಯಾಗಿ ರಾಜೀವ್ ಗಾಂಧಿ ಅಧಿಕಾರ ವಹಿಸಿಕೊಂಡಿದ್ದರು. 1984ರಿಂದ 1989 ರವರೆಗೆ ಪ್ರಧಾನಿಯಾಗಿದ್ದರು. ಅತ್ಯಂತ ಕಿರಿಯ ವಯಸ್ಸಿಗೆ ಪ್ರಧಾನಿಯಾಗಿದ್ದರು. 1991ರ ಮೇ 21ರಂದು ರಾಜೀವ್ ಗಾಂಧಿ ಹತ್ಯೆಗೀಡಾದರು.
2023ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಅಪರಾಧಿ ಎ.ಜಿ.ಪೇರರಿವಾಳನ್ ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿತ್ತು. ರಾಜೀವ್ ಗಾಂಧಿ ಹತ್ಯೆ ಪ್ರಕರಣದ 7 ಮಂದಿ ಅಪರಾಧಿಗಳಲ್ಲಿ ಪೇರರಿವಾಳನ್ ಒಬ್ಬರಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ರಾಜೀವ್ ಗಾಂಧಿ ಹತ್ಯೆ ಪ್ರಕರಣದಡಿ ಪೇರರಿವಾಳನ್ ಅವರನ್ನು 1991ರ ಜೂನ್ 19ರಂದು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.