ADVERTISEMENT

ಎಸ್‌ಐಆರ್‌ | ಬಿಜೆಪಿ ಐಟಿ ಸೆಲ್‌ನ ಆ್ಯಪ್‌ ಬಳಕೆ: ಮಮತಾ ಬ್ಯಾನರ್ಜಿ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 16:12 IST
Last Updated 6 ಜನವರಿ 2026, 16:12 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಗಂಗಾಸಾಗರ/ಕೋಲ್ಕತ್ತ: ‘ಬಿಜೆಪಿ ಐಟಿ ಸೆಲ್‌ ರೂಪಿಸಿದ ಮೊಬೈಲ್‌ ಆ್ಯಪ್‌ ಬಳಿಸಿಕೊಂಡು ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸುತ್ತಿದೆ. ಇದು ಅಕ್ರಮ, ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದರು.

ಈ ಆರೋಪದ ಮೂಲಕ ಎಸ್‌ಐಆರ್‌ ಕುರಿತ ವಿವಾದಗಳಿಗೆ ಮಮತಾ ಅವರು ಹೊಸ ಆಯಾಮ ನೀಡಿದಂತಾಗಿದೆ. ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದ್ದು, ‘ಇಂಥ ಆರೋಪಗಳು ಆಧಾರರಹಿತವಾದವು ಮತ್ತು ರಾಜಕೀಯ ಪ್ರೇರಿತವಾದವು’ ಎಂದು ಪ್ರತಿಕ್ರಿಯಿಸಿದೆ.

ಸಾಗರ ದ್ವೀಪಕ್ಕೆ ಕೈಗೊಂಡ 2 ದಿನಗಳ ಪ್ರವಾಸ ಮುಗಿಸಿ ಮಂಗಳವಾರ ಮರಳುವ ವೇಳೆ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು. ‘ಎಸ್‌ಐಆರ್‌ ನಡೆಸುವುದಕ್ಕಾಗಿ ಆಯೋಗವು ಯಾವೆಲ್ಲ ತಪ್ಪುಗಳನ್ನು ಮಾಡಬಹುದೋ ಆ ಎಲ್ಲವನ್ನೂ ಮಾಡುತ್ತಿದೆ. ಬದುಕಿರುವ ಅರ್ಹ ಮತದಾರರನ್ನು ಮೃತಪಟ್ಟಿದ್ದಾರೆ ಎಂದು ತೋರಿಸುತ್ತಿದ್ದಾರೆ. ವೃದ್ಧರನ್ನು, ಅನಾರೋಗ್ಯ ಪೀಡಿತರನ್ನು ಪೌರತ್ವ ಸಾಬೀತು ಮಾಡುವುದಕ್ಕೆ ವಿಚಾರಣೆಗೆ ಬನ್ನಿ ಎಂದು ಕರೆಯುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.