ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಮೇಘಸ್ಪೋಟದಿಂದ ಅಪಾರ ಹಾನಿಯಾಗಿದೆ
–ಪಿಟಿಐ ಚಿತ್ರ
ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಮೇಘಸ್ಪೋಟದಿಂದಾಗಿ ಉಂಟಾದ ಹಠಾತ್ ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಬಾ, ಕಾಂಗ್ರಾ, ಕುಲ್ಲು, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇಂದು (ಗುರುವಾರ) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಧರಂಪುರದ ವಿಪತ್ತು ಪೀಡಿತ ಸಯಾತಿ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳನ್ನು ಪುನರ್ ನಿರ್ಮಾಣ ವಿಶೇಷ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ.
ಇದುವರೆಗೆ ಐದು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗುರುತು ಇನ್ನಷ್ಟೇ ಪತ್ತೆಹಚ್ಚಬೇಕಿದೆ. ನಾಪತ್ತೆಯಾದ 34 ಜನರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದೆರಡು ದಿನದಿಂದ ರಾಜ್ಯದಲ್ಲಿ 11 ಮೇಘಸ್ಪೋಟ, ನಾಲ್ಕು ದಿಢೀರ್ ಪ್ರವಾಹ ಹಾಗೂ ಭೂಕುಸಿತ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸಿದ್ದವು. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಂಡಿ ಜಿಲ್ಲೆಯಲ್ಲೇ ಅನಾಹುತಗಳು ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿವೆ.
ಗೌಹರ್‌ನಲ್ಲಿ ನಾಲ್ಕು, ಕರ್‌ಸೋಗ್‌ನಲ್ಲಿ ಮೂರು, ಧರಂಪುರದಲ್ಲಿ ಎರಡು ಮತ್ತು ಥೂನಾಗ್ ಹಾಗೂ ಮಂಡಿಯಲ್ಲಿ ತಲಾ ಒಂದು ಮೇಘಸ್ಫೋಟಗಳು ವರದಿಯಾಗಿವೆ.
ಭಾರಿ ಮಳೆಯಿಂದಾಗಿ 282 ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಪ್ರಾಣಿಗಳಿಗೆ ಸಂಕಷ್ಟ ಎದುರಾಗಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಗಳಿಗೆ ನೇತೃತ್ವ ವಹಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.