ನವದೆಹಲಿ: ಲೋಕಸಭೆಯಲ್ಲಿ ನಡೆದ ಆಪರೇಷನ್ ಸಿಂಧೂರ ಚರ್ಚೆಯಲ್ಲಿ ಪಕ್ಷವು ತನಗೆ ಅವಕಾಶ ನೀಡದಿದ್ದರ ಕುರಿತ ಪತ್ರಿಕಾ ವರದಿಗಳನ್ನು ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ‘ಭಾರತ್ ಕ ರಹನೇ ವಾಲಾ ಹೂ, ಭಾರತ್ ಕಿ ಬಾತ್ ಸುನಾತಾ ಹೂ’ (ಭಾರತದ ನಿವಾಸಿ ನಾನು, ಭಾರತದ ಮಾತು ಕೇಳಿಸುತ್ತೇನೆ) ಹಿಂದಿ ಚಿತ್ರ ನಟ ಮನೋಜ್ ಕುಮಾರ್ ನಟಿಸಿದ ‘ಪೂರಬ್ ಔರ್ ಪಶ್ಚಿಮ್’ ಚಿತ್ರದ ಈ ಗೀತೆಯನ್ನು ನೆನಪಿಸಿಕೊಂಡಿದ್ದಾರೆ.
ಏ.22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಉತ್ತರವಾಗಿ ವಿವಿಧ ರಾಷ್ಟ್ರಗಳಿಗೆ ಭಾರತ ಕಳುಹಿಸಿದ್ದ ರಾಜತಾಂತ್ರಿಕ ನಿಯೋಗದಲ್ಲಿದ್ದ ಮನೀಶ್ ತಿವಾರಿ ಮತ್ತು ಶಶಿ ತರೂರ್, ಲೋಕಸಭೆಯಲ್ಲಿ ನಡೆಯಲಿರುವ ಇದೇ ವಿಷಯ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆಯೇ ಎಂಬ ಚರ್ಚೆಗಳು ವ್ಯಾಪಕವಾಗಿದ್ದವು.
ಇದೇ ವಿಷಯವಾಗಿ ಸಾಮಾಜಿಕ ಮಾದ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ತಿವಾರಿ, ‘ಸರ್ಕಾರದ ಪರವಾಗಿ ಮಾತನಾಡಿದ್ದ ಶಶಿ ತರೂರ್, ಮನೀಶ್ ತಿವಾರಿಗೆ ಲೋಕಸಭೆಯಲ್ಲಿ ಸಿಂಧೂರ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್ ಅವಕಾಶ ನೀಡಿಲ್ಲ’ ಎಂಬ ಶೀರ್ಷಿಕೆಯಡಿ ವಿವಿಧ ಪತ್ರಿಕೆಗಳು ಪ್ರಕಟಿಸಿದ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ.
ಸರ್ಕಾರ ಆಯ್ಕೆ ಮಾಡಿದ ನಿಯೋಗದಲ್ಲಿ ಕಾಂಗ್ರೆಸ್‌ನಿಂದ ಯಾರಿಗೆಲ್ಲ ಅವಕಾಶ ಸಿಕ್ಕಿಲ್ಲವೋ, ಅವರಿಗೆ ಲೋಕಸಭೆಯಲ್ಲಿ ಮಾತನಾಡಲು ಪಕ್ಷ ಅವಕಾಶ ನೀಡಿದೆ.
ಇದರ ಬೆನ್ನಲ್ಲೇ ತ್ರಿವರ್ಣದೊಂದಿಗಿನ ತಮ್ಮ ಚಿತ್ರದೊಂದಿಗೆ ವಿವಿಧ ಪತ್ರಿಕೆಗಳ ವರದಿಗಳನ್ನಿಟ್ಟು ಪೋಸ್ಟ್ ಮಾಡಿರುವ ತಿವಾರಿ, 1970ರಲ್ಲಿ ತೆರೆಕಂಡ ‘ಪೂರಬ್ ಔರ್ ಪಶ್ಚಿಮ್’ ಚಿತ್ರದ ಗೀತೆಯ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಆದರೆ ಈ ವಿಷಯದ ಕುರಿತು ಅವರು ಹೆಚ್ಚಿನದನ್ನು ಹೇಳಿಲ್ಲ.
ಆಪರೇಷನ್ ಸಿಂಧೂರ ನಂತರದಲ್ಲಿ ಸರ್ಕಾರದ ನಿಯೋಗದಲ್ಲಿ ಅಮೆರಿಕ ಹೋಗಲು ಉತ್ಸಾಹದಿಂದ ಪಾಲ್ಗೊಂಡಿದ್ದ ಶಶಿ ತರೂರ್ ಅವರನ್ನು ಲೋಕಸಭೆಯಲ್ಲಿ ನಡೆಯುವ ಚರ್ಚೆಗೆ ಕಾಂಗ್ರೆಸ್ ಆಯ್ಕೆ ಮಾಡುವುದು ಅನುಮಾನ ಎಂದೆನ್ನಲಾಗಿತ್ತು.
‘ಆಪರೇಷನ್ ಸಿಂಧೂರ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಪಕ್ಷವು ಶಶಿ ತರೂರ್ ಅವರನ್ನು ಕೇಳಿತ್ತು. ಆದರೆ ಅದಕ್ಕೆ ನಿರಾಕರಿಸಿದ ತರೂರ್, ‘ದಿ ಇಂಡಿಯನ್ ಪೋರ್ಟ್ಸ್ ಬಿಲ್ 2025’ರ ಕುರಿತು ಮಾತನಾಡುವುದಾಗಿ ಹೇಳಿದ್ದರು’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದರು.
ಏ. 22ರ ಪಹಲ್ಗಾಮ್ ಭಯೋತ್ಪಾದಕರ ದಾಳಿಯಲ್ಲಿ ಗುಪ್ತಚರ ವೈಫಲ್ಯ ಕುರಿತು ವಿಪಕ್ಷಗಳು ಈಗಾಗಲೇ ಬಹಿರಂಗವಾಗಿ ಟೀಕಿಸಿವೆ. ಈ ದಾಳಿಯಲ್ಲಿ 26 ಜನ ಪ್ರವಾಸಿಗರು ಮೃತಪಟ್ಟಿದ್ದರು. ಇದರ ನಂತರದಲ್ಲಿ ಭಯೋತ್ಪಾಕರನ್ನು ಗುರಿಯಾಗಿಸಿ ಭಾರತೀಯ ಸೇನೆಯು ಮೇ 7ರಿಂದ 10ರವರೆಗೆ ‘ಆಪರೇಷನ್ ಸಿಂಧೂರ‘ ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ನಡೆಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಏರ್ಪಟ್ಟಿತ್ತು.
‘ಭಾರತದ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಹಲವು ಬಾರಿ ವಾಗ್ದಾಳಿ ನಡೆಸಿದ್ದರು. ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಬೆಂಬಲ ದೊರೆತಿಲ್ಲ ಮತ್ತು ಕದನ ವಿರಾಮಕ್ಕೂ ಮೊದಲು ಮಧ್ಯಸ್ಥಿಕೆ ವಹಿಸಲು ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸಿದ್ದು ಯಾರು ಎಂದು ಎರಡು ಪ್ರಮುಖ ಪ್ರಶ್ನೆಗಳನ್ನು ರಾಹುಲ್ ಕೇಳಿದ್ದರು.
ಮಧ್ಯಸ್ಥಿಕೆ ವಹಿಸಿ ತಾನೇ ಕದನ ವಿರಾಮ ನಡೆಸಿದೆ ಎಂಬ ಟ್ರಂಪ್ ಹೇಳಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.