ಸೋನಿಯಾ ಗಾಧಿ, ಮನಮೋಹನ ಸಿಂಗ್
(ಪಿಟಿಐ ಸಂಗ್ರಹ ಚಿತ್ರ)
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿರುವ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ, 'ನನ್ನ ಪಾಲಿಗಿದು ವೈಯಕ್ತಿಕ ನಷ್ಟ' ಎಂದು ಹೇಳಿದ್ದಾರೆ.
ಮನಮೋಹನ ಅವರ ತಿಳಿವಳಿಕೆ, ಉದಾತ್ತಗುಣ, ವಿನಯವಂತಿಕೆ ಗುಣಗಳನ್ನು ಒತ್ತಿ ಹೇಳಿರುವ ಸೋನಿಯಾ, ಮಾಜಿ ಪ್ರಧಾನಿಯ ಅಗಲಿಕೆಯು ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.
'ಮನಮೋಹನ ಸಿಂಗ್ ಅವರು ನನ್ನ ಸೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಅಪಾರ ನಷ್ಟವಾಗಿದೆ' ಎಂದು ಹೇಳಿದ್ದಾರೆ.
'ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಮನಮೋಹನ ಸಿಂಗ್ ಸಲ್ಲಿಸಿರುವ ಅಪಾರವಾದ ಕೊಡುಗೆಯನ್ನು ಅಳೆಯಲಾಗದು. ಅವರಂತಹ ನಾಯಕರನ್ನು ಹೊಂದಿದ್ದಕ್ಕಾಗಿ ಇಡೀ ದೇಶ ಮತ್ತು ನಮ್ಮ ಪಕ್ಷ ಹೆಮ್ಮೆಪಟ್ಟುಕೊಳ್ಳುತ್ತಿದ್ದು, ಕೃತಜ್ಞರಾಗಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
'ದೇಶಕ್ಕಾಗಿ ಹೃದಯವಂತಿಕೆ ಮತ್ತು ಮನಸ್ಸಿನಿಂದ ಮನಮೋಹನ ಸಿಂಗ್ ಸೇವೆ ಸಲ್ಲಿಸಿದ್ದರು. ದೇಶದ ಪ್ರತಿಯೊಬ್ಬರ ಹೃದಯದಲ್ಲಿ ಮನಮೋಹನ ಅವರ ಮೇಲಿನ ಪ್ರೀತಿ ಅಡಗಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
'ನನ್ನ ಪಾಲಿಗೆ ಮನಮೋಹನ ಅವರ ನಿಧನವು ವೈಯಕ್ತಿಕ ನಷ್ಟವಾಗಿದೆ. ಅವರು ನನ್ನ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದರು. ಸದಾ ಸೌಮ್ಯರಾಗಿರುತ್ತಿದ್ದರು ಮತ್ತು ದೃಢನಿಶ್ಚಯವನ್ನು ಹೊಂದಿರುತ್ತಿದ್ದರು' ಎಂದು ಹೇಳಿದ್ದಾರೆ.
'ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅವರ ಬದ್ಧತೆಯು ಅಚಲವಾಗಿತ್ತು' ಎಂದು ಅವರು ಬಣ್ಣಿಸಿದ್ದಾರೆ.
ಸೋನಿಯಾ ಗಾಧಿ, ಮನಮೋಹನ ಸಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.