ADVERTISEMENT

ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ: ಹತ್ತು ಮಂದಿ ಸ್ಥಳದಲ್ಲೇ ಸಾವು, ಹಲವರು ನಾಪತ್ತೆ

ಪಿಟಿಐ
Published 16 ಸೆಪ್ಟೆಂಬರ್ 2025, 11:42 IST
Last Updated 16 ಸೆಪ್ಟೆಂಬರ್ 2025, 11:42 IST
<div class="paragraphs"><p>ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ</p></div>

ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ

   

ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ ಸಂಭವಿಸಿದ ಪರಿಣಾಮ ದಿಢೀರ್ ಪ್ರವಾಹದ ಸ್ಥಿತಿ ಉಂಟಾಗಿ ಹತ್ತು ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದ ಗರ್ವಾಲ್ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ರಸ್ತೆ, ಸೇತುವೆ, ಹೋಟೆಲ್‌ ಮತ್ತು ಅಂಗಡಿಗಳು ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಡೆಹ್ರಾಡೂನ್ ಬಳಿಯ ಜನಪ್ರಿಯ ಪ್ರವಾಸಿ ತಾಣವಾದ ಸಹಸ್ರಧಾರ, ಮಾಲ್ ದೇವತಾ ಮತ್ತು ಮಸ್ಸೂರಿಯಲ್ಲಿ ಮೇಘಸ್ಫೋಟ ಸಂಭವಿಸಿದ ಪರಿಣಾಮ ವ್ಯಾಪಕ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ.

ಡೆಹ್ರಾಡೂನ್‌ನಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ತಿಳಿಸಿದ್ದಾರೆ.

ಸಹಸ್ರಧಾರ ಬಳಿಯ ಕಾರ್ಲಿಗಡ್ ಮತ್ತು ಮಜ್ಯಾರ್ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ್ದು, ಅನೇಕ ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಸನ್ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದ ರಭಸಕ್ಕೆ ಟ್ರ್ಯಾಕ್ಟರ್‌ವೊಂದು ಕೊಚ್ಚಿಹೋಗಿದೆ. ಘಟನೆಯಲ್ಲಿ ಐವರು ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಕ್ರತಾ-ಕಲ್ಸಿ ರಸ್ತೆಯಲ್ಲಿ ಸ್ಕೂಟರ್ ಮೇಲೆ ಬಂಡೆ ಉರುಳಿ ಬಿದ್ದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಡೆಹ್ರಾಡೂನ್-ಮುಸ್ಸೂರಿ ಮಾರ್ಗದ ಹಲವು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ. ಅದೇ ರೀತಿ ನಂದಾ ಕಿ ಚೌಕಿ ಬಳಿ ಸೇತುವೆಯೊಂದು ಕೊಚ್ಚಿ ಹೋಗಿದ್ದು, ಡೆಹ್ರಾಡೂನ್-ಪೌಂಟಾ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಭೂಕುಸಿತದಿಂದಾಗಿ ರಾಜ್‌ಪುರ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಡೆಹ್ರಾಡೂನ್ ನಗರದ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನ ಬಳಿ ಭೂಕುಸಿತ ಸಂಭವಿಸಿದ್ದು, ಅನೇಕ ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಘಟನಾಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.