ADVERTISEMENT

ಮಹಿಳಾ ಮೀಸಲು ಜಾರಿಗೆ ಸಂಸತ್ತು, ಉತ್ತರ ಭಾರತ ಮನಸ್ಥಿತಿ ಅನುಕೂಲಕರವಾಗಿಲ್ಲ: ಪವಾರ್

ಪಿಟಿಐ
Published 18 ಸೆಪ್ಟೆಂಬರ್ 2022, 10:12 IST
Last Updated 18 ಸೆಪ್ಟೆಂಬರ್ 2022, 10:12 IST
ಶರದ್‌ ಪವಾರ್‌
ಶರದ್‌ ಪವಾರ್‌   

ಪುಣೆ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸಲು ಸಂಸತ್ತು ಮತ್ತು ಉತ್ತರ ಭಾರತೀಯ ಮನಸ್ಥಿತಿ ಇನ್ನೂ ಅನುಕೂಲಕರವಾಗಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ಪುಣೆಯ ವೈದ್ಯರ ಸಂಘವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪವಾರ್‌ ಮತ್ತು ಅವರ ಪುತ್ರಿ, ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಅವರನ್ನು ಸಂದರ್ಶನ ಮಾಡಲಾಯಿತು. ಈ ವೇಳೆ ಪವಾರ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲು ಕಲ್ಪಿಸುವ ಉದ್ದೇಶ ಹೊಂದಿರುವ ‘ಮಹಿಳಾ ಮೀಸಲಾತಿ ಮಸೂದೆ’ ಜಾರಿಗೆ ದೇಶ ಇನ್ನೂ ಮಾನಸಿಕವಾಗಿ ಸಿದ್ಧವಾಗಿಲ್ಲವೇ ಅಥವಾ ಮಹಿಳಾ ನಾಯಕತ್ವವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ದೇಶ ಇಲ್ಲವೇ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ನಾನು ಲೋಕಸಭೆಯ ಕಾಂಗ್ರೆಸ್‌ ಸದಸ್ಯನಾಗಿದ್ದಾಗಿನಿಂದಲೂ ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.

‘ಸಂಸತ್ತಿನ ಮನಸ್ಥಿತಿ... ವಿಶೇಷವಾಗಿ ಉತ್ತರ ಭಾರತೀಯ ಮನಸ್ಥಿತಿಯು ಈ ವಿಷಯದ ಬಗ್ಗೆ ಅನುಕೂಲಕರವಾಗಿಲ್ಲ. ನಾನು ಕಾಂಗ್ರೆಸ್ ಲೋಕಸಭಾ ಸದಸ್ಯನಾಗಿದ್ದಾಗಲೂ ಮಹಿಳಾ ಮೀಸಲಾತಿ ವಿಷಯದ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಿದ್ದೆ. ಆದರೆ, ಈ ವಿಚಾರವಾಗಿ ಸಂಸತ್ತಿನಲ್ಲಿ ಭಾಷಣ ಮಾಡಿ ಮುಗಿಸಿ ಹಿಂದೆ ತಿರುಗಿ ನೋಡಿದರೆ, ನನ್ನ ಪಕ್ಷದವರೇ ಎದ್ದು ಹೊರಟು ಹೋಗಿರುತ್ತಿದ್ದರು. ಇದು ನನ್ನ ಪಕ್ಷದವರಿಗೂ ಜೀರ್ಣವಾಗುತ್ತಿರಲಿಲ್ಲ’ ಎಂದು ಅವರು ಕಾಂಗ್ರೆಸ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷಗಳು ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸುತ್ತಲೇ ಇರಬೇಕು ಎಂದು ಪವಾರ್‌ ಹೇಳಿದರು.

‘ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ, ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿಯಂತಹ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ಪರಿಚಯಿಸಿದೆ. ಇದನ್ನು ಆರಂಭದಲ್ಲಿ ವಿರೋಧಿಸಲಾಯಿತು. ಆದರೆ, ನಂತರ ಜನರು ಅದನ್ನು ಒಪ್ಪಿಕೊಂಡರು’ ಎಂದು ಅವರು ಹೇಳಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.