
ಹೈದರಾಬಾದ್: ಭಾರತದ ಮೆಟ್ರೊ ರೈಲು ಜಾಲವು ಇನ್ನೂ 2–3 ವರ್ಷಗಳಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಅವರು ಮಂಗಳವಾರ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ಜರುಗಿದ ನೈರುತ್ಯ ರಾಜ್ಯಗಳ ನಗರಾಭಿವೃದ್ಧಿ ಸಚಿವರ ಸಭೆಯಲ್ಲಿ ಅವರು ಭಾಗವಹಿಸಿದ್ದರು.
ಅಮೆರಿಕ ಮತ್ತು ಚೀನಾ ದೇಶಗಳು ನಮಗಿಂತ ಮುಂಚೆಯೇ ಮೆಟ್ರೊ ಯೋಜನೆಗಳನ್ನು ಆರಂಭಿಸಿದ್ದವು. ಅಮೆರಿಕದಲ್ಲಿ 1,400 ಕಿ.ಮೀ ಮೆಟ್ರೊ ರೈಲು ಜಾಲವಿದೆ. ಭಾರತದಲ್ಲಿ 1,100 ಕಿ.ಮೀ ಮೆಟ್ರೊ ಇದೆ. ನಾವು ವೇಗವಾಗಿ ಗುರಿ ತಲುಪುತ್ತಿದ್ದು, ಇನ್ನೂ 2–3 ವರ್ಷಗಳಲ್ಲಿ ಅಮೆರಿಕವನ್ನು ಹಿಂದಿಕ್ಕಲಿದ್ದೇವೆ ಎಂದು ಹೇಳಿದ್ದಾರೆ.
ದೇಶದ ಮೆಟ್ರೊ ರೈಲು ಜಾಲವು ಕ್ಷೀಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. 2004-05ರಲ್ಲಿ ದೇಶದ 5 ನಗರಗಳಲ್ಲಿ ಮಾತ್ರ ಮೆಟ್ರೊ ಸೌಲಭ್ಯವಿತ್ತು. ಇದೀಗ 24 ನಗರಗಳಲ್ಲಿ ಮೆಟ್ರೊ ಸಂಚಾರವಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ನಗರೀಕರಣವು ವೇಗವಾಗಿ ಆಗುತ್ತಿದೆ. 2050ರ ವೇಳೆಗೆ ದೇಶದ ಜಿಡಿಪಿ ಅಲ್ಲಿ ನಗರಗಳ ಕೊಡುಗೆಯು ಶೇ 80ರಷ್ಟು ಇರುತ್ತದೆ. ಕೇಂದ್ರ ಸರ್ಕಾರವು ನಗರಗಳ ಅಭಿವೃದ್ದಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಮನೋಹರ್ ಲಾಲ್ ಅವರು ಮಾತನಾಡುವುದಕ್ಕೂ ಮೊದಲು ಮಾತನಾಡಿದ್ದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರು, ಹೈದರಾಬಾದ್‌ನಲ್ಲಿ ಫೇಸ್ –2 ಮೆಟ್ರೊ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.